16ಇಸ್ರಾಯೇಲರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು.
17ಅವನು ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ಕರ್ತನ ಮುಂದೂತನಾಗಿ ಹೋಗುವನು. ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ, ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತನಿಗಾಗಿ ಜನರನ್ನು ಸಿದ್ಧಪಡಿಸುವನು” ಎಂದು ಹೇಳಿದನು.
18ಜಕರೀಯನು ಆ ದೂತನಿಗೆ, “ಈ ಮಾತು ನೆರವೇರುವುದೆಂದು ನಾನು ತಿಳಿದುಕೊಳ್ಳುವುದಾದರೂ ಹೇಗೆ? ನಾನು ಮುದುಕನು; ನನ್ನ ಹೆಂಡತಿಗೂ ಮುಪ್ಪಿನ ವಯಸ್ಸು” ಎಂದು ಹೇಳಿದನು.
19ಅದಕ್ಕೆ ಆ ದೂತನು, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನೊಂದಿಗೆ ಮಾತನಾಡಿ ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ.
20ಇಗೋ, ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು; ಆದರೆ ನೀನು ಇದನ್ನು ನಂಬದೆಹೋದುದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವೆ” ಎಂದು ಅವನಿಗೆ ಉತ್ತರಕೊಟ್ಟನು.
21ಇತ್ತ ಜನರು ಜಕರೀಯನಿಗಾಗಿ ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
22ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತನಾಡಲಾರದೆ ಇರಲು ಅವರು, ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳಿದುಕೊಂಡರು. ಜಕರೀಯನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು.
23ಆತನ ಯಾಜಕವರ್ಗದ ಸೇವೆಯ ದಿನಗಳು ಮುಗಿದ ನಂತರ ಜಕರೀಯನು ತನ್ನ ಮನೆಗೆ ಹೋದನು.
24ಕೆಲವು ದಿನಗಳಾದ ನಂತರ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದಳು.
25“ಕರ್ತನು ಈ ವಯಸ್ಸಿನಲ್ಲಿ ನನ್ನನ್ನು ಕಟಾಕ್ಷಿಸಿ, ನನಗೆ ಈ ರೀತಿಯಾಗಿ ಮಾಡಿ, ಜನರ ಮಧ್ಯದಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ” ಎಂದು ಹೇಳಿದಳು.