Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನ್ಯಾಯ - ನ್ಯಾಯ 11

ನ್ಯಾಯ 11:5-26

Help us?
Click on verse(s) to share them!
5ಆಗ ಗಿಲ್ಯಾದಿನ ಹಿರಿಯರು ಯೆಪ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರುವುದಕ್ಕಾಗಿ ಅಲ್ಲಿಗೆ ಹೋದರು.
6ಅವರು ಅವನಿಗೆ, “ನಾವು ಅಮ್ಮೋನಿಯರೊಡನೆ ಯುದ್ಧಮಾಡುವ ಹಾಗೆ ನೀನು ಬಂದು ನಮ್ಮ ನಾಯಕನಾಗು” ಎಂದು ಬೇಡಿಕೊಂಡರು.
7ಅವನು ಅವರಿಗೆ, “ನನ್ನನ್ನು ಹಗೆಮಾಡಿ, ನನ್ನ ತಂದೆಯ ಮನೆಯಿಂದ ಓಡಿಸಿಬಿಟ್ಟವರು ನೀವೇ ಅಲ್ಲವೋ? ನಿಮಗೆ ಕಷ್ಟ ಬಂದಾಗ ನನ್ನ ಬಳಿಗೆ ಯಾಕೆ ಬಂದಿರಿ?” ಎನ್ನಲು
8ಅವರು, “ಆದುದರಿಂದಲೇ ಈಗ ತಿರುಗಿ ನಿನ್ನ ಬಳಿಗೆ ಬಂದಿದ್ದೇವೆ; ನಮ್ಮ ಸಂಗಡ ಬಂದು ಅಮ್ಮೋನಿಯರೊಡನೆ ಯುದ್ಧಮಾಡುವುದಾದರೆ ಗಿಲ್ಯಾದಿನವರಿಗೆಲ್ಲಾ ನೀನೇ ನಾಯಕನಾಗಿರುವಿ” ಎಂದು ಹೇಳಿದರು.
9ಆಗ ಯೆಪ್ತಾಹನು ಅವರಿಗೆ, “ನೀವು ನನ್ನನ್ನು ಅಮ್ಮೋನಿಯರೊಡನೆ ಯುದ್ಧಮಾಡುವುದಕ್ಕೋಸ್ಕರ ಕರೆದುಕೊಂಡು ಹೋಗುವಲ್ಲಿ ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟರೆ ನಿಜವಾಗಿ ನನ್ನನ್ನು ಅಧಿಪತಿಯನ್ನಾಗಿ ಮಾಡುವಿರೋ?” ಎಂದು ಕೇಳಲು
10ಅವರು ಅವನಿಗೆ, “ಹಾಗೆಯೇ ಮಾಡುವೆವು; ನಮ್ಮಿಬ್ಬರ ಈ ಮಾತುಗಳಿಗೆ ಯೆಹೋವನೇ ಸಾಕ್ಷಿ” ಎಂದು ಉತ್ತರಕೊಟ್ಟರು.
11ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಜನರು ಅವನನ್ನು ಅಧಿಪತಿಯನ್ನಾಗಿಯೂ, ನಾಯಕನನ್ನಾಗಿಯೂ ನೇಮಿಸಿದರು. ಮತ್ತು ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು.
12ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಏನು ಕಾರಣ?” ಎಂದು ಕೇಳಿದನು.
13ಆ ಅರಸನು ದೂತರಿಗೆ, “ಇಸ್ರಾಯೇಲರು ಐಗುಪ್ತದಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್ ಮತ್ತು ಯೊರ್ದನ್ ಹೊಳೆಗಳವರೆಗೂ ಇದ್ದ ನನ್ನ ದೇಶವನ್ನು ವಶಪಡಿಸಿಕೊಂಡರಲ್ಲಾ; ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು” ಎಂದು ಹೇಳಿ ಕಳುಹಿಸಿದನು.
14ಯೆಪ್ತಾಹನು ಇನ್ನೊಂದು ಸಾರಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ,
15“ಯೆಪ್ತಾಹನಾದ ನನ್ನ ಮಾತನ್ನು ಕೇಳು; ಇಸ್ರಾಯೇಲರು ಮೋವಾಬ್ಯರ ಮತ್ತು ಅಮ್ಮೋನಿಯರ ದೇಶವನ್ನು ತೆಗೆದುಕೊಳ್ಳಲೇ ಇಲ್ಲ.
16ಅವರು ಐಗುಪ್ತವನ್ನು ಬಿಟ್ಟನಂತರ ಅರಣ್ಯದಲ್ಲಿ ಸಂಚರಿಸಿ, ಕೆಂಪು ಸಮುದ್ರಕ್ಕೂ ಅನಂತರ ಕಾದೇಶಿಗೂ ಬಂದರು.
17ಅವರು ಅಲ್ಲಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಬೇಡಿಕೊಳ್ಳಲು ಅವನು ಒಪ್ಪಿಕೊಳ್ಳಲಿಲ್ಲ. ತರುವಾಯ ಮೋವಾಬ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಲು ಅವನೂ ಒಪ್ಪಿಕೊಳ್ಳಲಿಲ್ಲ; ಆದುದರಿಂದ ಅವರು ಕಾದೇಶಿನಲ್ಲಿಯೇ ಉಳಿದುಕೊಂಡರು.
18ಅನಂತರ ಅವರು ಅರಣ್ಯದಲ್ಲಿ ಪ್ರಯಾಣಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್‍ ದೇಶದ ಪೂರ್ವದಿಕ್ಕಿಗೆ ಬಂದು, ಅದರ ಮೇರೆಯಾಗಿರುವ ಅರ್ನೋನ್ ಹೊಳೆಯ ಆಚೆಯಲ್ಲಿ ಇಳಿದುಕೊಂಡರು. ಮೋವಾಬ್ಯರ ಮೇರೆಯೊಳಗೆ ಕಾಲಿಡಲಿಲ್ಲ.
19ತರುವಾಯ ಅವರು ಹೆಷ್ಬೋನನ್ನು ರಾಜಧಾನಿ ಮಾಡಿಕೊಂಡಿದ್ದ ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ದೇಶವನ್ನು ದಾಟಿ ನಮ್ಮ ದೇಶಕ್ಕೆ ಹೋಗುವುದಕ್ಕೆ ಅಪ್ಪಣೆಕೊಡು’ ಎಂದು ಅವನನ್ನು ಬೇಡಿಕೊಂಡರು.
20ಆದರೆ ಸೀಹೋನನು ಅವರನ್ನು ನಂಬದೆ ತನ್ನ ಸೀಮೆಯನ್ನು ದಾಟಿಹೋಗುವುದಕ್ಕೆ ಅಪ್ಪಣೆಕೊಡದೆ ತನ್ನ ಜನರನ್ನು ಕೂಡಿಸಿಕೊಂಡು ಯಹಚಕ್ಕೆ ಬಂದು ಅವರೊಡನೆ ಯುದ್ಧಮಾಡಿದನು.
21ಇಸ್ರಾಯೇಲರ ದೇವರಾದ ಯೆಹೋವನು ಸೀಹೋನನನ್ನೂ, ಅವನ ಜನರೆಲ್ಲರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು, ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು.
22ಹೀಗೆ ಇಸ್ರಾಯೇಲರು ಅರ್ನೋನಿನಿಂದ ಯಬ್ಬೋಕಿನವರೆಗೂ, ಅರಣ್ಯದಿಂದ ಯೊರ್ದನಿನವರೆಗೂ ಇದ್ದ ಅಮೋರಿಯರ ಪ್ರಾಂತ್ಯವನ್ನೆಲ್ಲಾ ವಶಮಾಡಿಕೊಂಡರು.
23ಇಸ್ರಾಯೇಲರ ದೇವರಾದ ಯೆಹೋವನು ಈ ದೇಶವನ್ನು ಅಮೋರಿಯರಿಂದ ತೆಗೆದು ತನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಕೊಟ್ಟ ಮೇಲೆ ನೀನು ಅದನ್ನು ತೆಗೆದುಕೊಳ್ಳುವುದು ಹೇಗೆ?
24ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವನು ನಮಗೆ ಒಪ್ಪಿಸಿಕೊಡುವುದನ್ನು ನಾವು ಸ್ವಾಧೀನಪಡಿಸಿಕೊಳ್ಳುವುದು ನ್ಯಾಯವಾಗಿದೆ.
25ಚಿಪ್ಪೋರನ ಮಗನೂ ಮೋವಾಬ್ಯರ ಅರಸನೂ ಆದ ಬಾಲಾಕನಿಗಿಂತ ನೀನು ಹೆಚ್ಚಿನವನೋ? ಅವನು ಇಸ್ರಾಯೇಲರೊಡನೆ ಎಂದಾದರೂ ವಿವಾದಮಾಡಿದನೋ? ಅಥವಾ ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೋ?
26ಇಸ್ರಾಯೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲಿಯೂ, ಅವುಗಳ ಗ್ರಾಮಗಳಲ್ಲಿಯೂ, ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲಿಯೂ ವಾಸಿಸುತ್ತಿದ್ದಾರಲ್ಲಾ. ಇಷ್ಟು ದಿನಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ?

Read ನ್ಯಾಯ 11ನ್ಯಾಯ 11
Compare ನ್ಯಾಯ 11:5-26ನ್ಯಾಯ 11:5-26