Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಜೆಕ

ಜೆಕ 3

Help us?
Click on verse(s) to share them!
1ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವುದನ್ನು ಯೆಹೋವನು ನನಗೆ ತೋರಿಸಿದನು. ಸೈತಾನನು ಯೆಹೋಶುವನಿಗೆ ಪ್ರತಿವಾದಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು.
2ಆಗ ಯೆಹೋವನ ದೂತನು ಸೈತಾನನಿಗೆ, “ಯೆಹೋವನು ನಿನ್ನನ್ನು ಖಂಡಿಸಲಿ! ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ?” ಎಂದು ಹೇಳಿದನು.
3ಯೆಹೋಶುವನು ದೇವದೂತನ ಮುಂದೆ ಕೊಳೆಯಾದ ಬಟ್ಟೆಯನ್ನು ಧರಿಸಿ ನಿಂತಿರಲು,
4ದೇವದೂತನು ತನ್ನ ಸೇವಕರಿಗೆ, “ಇವನ ಕೊಳೆಬಟ್ಟೆಗಳನ್ನು ತೆಗೆದುಬಿಡಿರಿ” ಎಂದು ಅಪ್ಪಣೆ ಕೊಟ್ಟು ಅವನಿಗೆ, “ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠವಸ್ತ್ರವನ್ನು ತೊಡಿಸುವೆನು” ಎಂದು ಹೇಳಿದನು.
5“ಇವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ” ಎಂದು ನಾನು ಅಪ್ಪಣೆಕೊಡಲು ಅವರು ಅವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿ ಅವನಿಗೆ ವಸ್ತ್ರಗಳನ್ನು ತೊಡಿಸಿದರು, ಆಗ ಯೆಹೋವನ ದೂತನು ಎದ್ದು ನಿಂತನು.
6ಆಗ ಯೆಹೋವನ ದೂತನು ಯೆಹೋಶುವನಿಗೆ ಈ ಮಾತನ್ನು ಕೊಟ್ಟನು.
7ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನನ್ನ ಮಾರ್ಗಗಳಲ್ಲಿ ನಡೆದು, ನಾನು ನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆ ನನ್ನ ಆಲಯದ ಮುಖ್ಯಾಧಿಕಾರಿಯಾಗಿ ನನ್ನ ಪ್ರಾಕಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡುವೆ; ನನ್ನ ಸನ್ನಿಧಾನದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು.
8ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಕೇಳಿರಿ. ಇಗೋ, ಮೊಳಕೆ ಎಂಬ ನನ್ನ ಸೇವಕನನ್ನು ಹೊರಡಿಸುತ್ತೆನೆಂಬುದಕ್ಕೆ ಇವರೇ ಮುಂಗುರುತು.
9ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡಿರಿ; ಆ ಒಂದೇ ಕಲ್ಲಿನಲ್ಲಿ ಏಳು ಕಣ್ಣುಳ್ಳಾತನ ದೃಷ್ಟಿಯು ಬಿದ್ದಿದೆ; ಇಗೋ ನಾನೇ ಅದರಲ್ಲಿ ಕೆತ್ತನೆ ಕೆತ್ತುವೆನು. ಇದು ಸೇನಾಧೀಶ್ವರನಾದ ಯೆಹೋವನ ನುಡಿ. ‘ಒಂದೇ ದಿನದೊಳಗೆ ಈ ದೇಶದ ಪಾಪವನ್ನು ಪರಿಹರಿಸುವೆನು.’
10“ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಆ ದಿನದಲ್ಲಿ ನೀವೆಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ನೆಮ್ಮದಿಯಿಂದ ವಿಶ್ರಮಿಸಲು ಕರೆಯುವಿರಿ.’”