1ದಾವೀದನ ಕೀರ್ತನೆ. ಕೆಟ್ಟ ನಡತೆಯುಳ್ಳವರನ್ನು ನೋಡಿ ತಳಮಳಗೊಳ್ಳಬೇಡ; ದುರಾಚಾರಿಗಳನ್ನು ನೋಡಿ ಅಸೂಯೆಪಡಬೇಡ.
2ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಹಸಿರು ಸಸಿಯಂತೆ ಬಾಡಿಹೋಗುವರು.
3ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.
4ನೀನು ಯೆಹೋವನಲ್ಲಿ ಸಂತೋಷಿಸು; ಆಗ ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.
5ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.
6ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ, ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.
7ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.