11ಸ್ವಲ್ಪಕಾಲದ ನಂತರ ಆತನು ನಾಯಿನ್ ಎಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರು ಮತ್ತು ಬಹುಜನರು ಹೋದರು.
12ಆತನು ಊರು ಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೊರಗೆ ತರುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು; ಆಕೆಯು ವಿಧವೆಯಾಗಿದ್ದಳು. ಆಕೆಯ ಸಂಗಡ ಊರಿನವರು ಅನೇಕರಿದ್ದರು.
13ಕರ್ತನು ಆಕೆಯನ್ನು ಕಂಡು ಕನಿಕರಿಸಿ, “ಅಳಬೇಡ” ಎಂದು ಆಕೆಗೆ ಹೇಳಿ,
14ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ” ಅಂದನು.
15ಅನ್ನುತ್ತಲೇ ಸತ್ತಿದ್ದವನು ಎದ್ದು ಕುಳಿತುಕೊಂಡು ಮಾತನಾಡುವುದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
16ಎಲ್ಲರು ಭಯಹಿಡಿದವರಾಗಿ, “ಮಹಾಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರನ್ನು ಸಂದರ್ಶಿಸಲು ಬಂದಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.
17ಈ ಸುದ್ದಿಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.
18ಯೋಹಾನನ ಶಿಷ್ಯರು ನಡೆದ ಸಂಗತಿಗಳನ್ನೆಲ್ಲಾ ಆತನಿಗೆ ತಿಳಿಸಲು,
19ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವನು ನೀನೋ ಅಥವಾ ನಾವು ಬೇರೊಬ್ಬನಿಗಾಗಿ ಕಾಯಬೇಕೋ?” ಎಂದು ಕರ್ತನನ್ನು ಕೇಳಲು ಹೇಳಿಕಳುಹಿಸಿದನು.
20ಅವರು ಯೇಸುವಿನ ಬಳಿಗೆ ಬಂದು, “‘ಬರಬೇಕಾದವನು ನೀನೋ ಅಥವಾ ನಾವು ಮತ್ತೊಬ್ಬನ ಬರುವಿಕೆಗಾಗಿ ಕಾಯಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕನಾದ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಅಂದರು.
21ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಕಾಯಿಲೆ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು.
22ಹೀಗಿರಲು ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ.
23ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು” ಎಂದು ಹೇಳಿದನು.
24ಯೋಹಾನನ ಶಿಷ್ಯರು ಹಿಂತಿರುಗಿ ಹೋಗಲು ಆತನು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ, “ಏನು ನೋಡಬೇಕೆಂದು ಮರುಭೂಮಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ?
25ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ.
26ಹಾಗಾದರೆ ನೀವು ಏನು ನೋಡಬೇಕೆಂದು ಹೋಗಿದ್ದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದ್ದಿರಿ ಎಂದು ನಿಮಗೆ ಹೇಳುತ್ತೇನೆ.
27‘ಇಗೋ, ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ. ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸಿದ್ಧಮಾಡುವನು,’ ಎಂದು ಯಾರ ವಿಷಯವಾಗಿ ಬರೆದದೆಯೋ, ಆ ಪುರುಷನು ಅವನೇ.
28ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಯೋಹಾನನಿಗಿಂತ ಮಹಾಪುರುಷನು ಒಬ್ಬನೂ ಹುಟ್ಟಿಲ್ಲ, ಅದರೂ ದೇವರ ರಾಜ್ಯದಲ್ಲಿ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು” ನಿಮಗೆ ಹೇಳುತ್ತೇನೆ.
29ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ಜನರೆಲ್ಲರೂ, ಸುಂಕದವರೂ ಸಹ ಆತನ ಉಪದೇಶವನ್ನು ಕೇಳಿದಾಗ, ದೇವರು ನೀತಿವಂತನೆಂದು ಒಪ್ಪಿಕೊಂಡರು.
30ಆದರೆ ಫರಿಸಾಯರೂ ಧರ್ಮೋಪದೇಶಕರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ಅವರು ತಮ್ಮ ಕುರಿತಾದ ದೈವಸಂಕಲ್ಪವನ್ನು ನಿರಾಕರಿಸಿದರು.
31ಯೇಸು ತಮ್ಮ ಬೋಧನೆಯ ಮುಂದುವರಿಸುತ್ತಾ, “ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ?
32ಪೇಟೆಯಲ್ಲಿ ಕುಳಿತುಕೊಂಡು, ‘ನಾವು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ಗೋಳಾಡಿದೆವು, ನೀವು ಅಳಲಿಲ್ಲ’ ಎಂದು ಒಬ್ಬರಿಗೊಬ್ಬರು ಕೂಗಿ ಹೇಳುವಂಥ ಮಕ್ಕಳನ್ನು ಹೋಲುತ್ತಾರೆ.
33ಏಕೆಂದರೆ ಸ್ನಾನಿಕನಾದ ಯೋಹಾನನು ಬಂದಿದ್ದಾನೆ; ಅವನು ರೊಟ್ಟಿ ತಿನ್ನದವನು, ದ್ರಾಕ್ಷಾರಸ ಕುಡಿಯದವನು; ನೀವು, ‘ಅವನಿಗೆ ದೆವ್ವ ಹಿಡಿದದೆ’ ಅನ್ನುತ್ತೀರಿ.
34ಮನುಷ್ಯಕುಮಾರನು ಬಂದಿದ್ದಾನೆ, ಆತನು ಅನ್ನ ಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ. ನೀವು, ‘ಇಗೋ, ಈತನು ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಷ್ಠರ ಗೆಳೆಯನು’ ಅನ್ನುತ್ತೀರಿ.
35ಆದರೆ ಜ್ಞಾನವಾದರೋ ತನ್ನ ಎಲ್ಲಾ ಮಕ್ಕಳಿಂದ ಸಮರ್ಥನೆ ಪಡೆದದೆ” ಅಂದನು.
36ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಆತನ ಸಂಗಡ ಊಟಕ್ಕೆ ಕುಳಿತುಕೊಂಡನು.
37ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು,
38ಯೇಸುವಿನ ಹಿಂದೆ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ನೆನಸುತ್ತಾ ತನ್ನ ತಲೆ ಕೂದಲಿನಿಂದ ಒರಸಿ, ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.
39ಆದರೆ ಆತನನ್ನು ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು, “ಇವಳು ದುರಾಚಾರಿ; ಈತನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳಿದುಕೊಳ್ಳುತ್ತಿದ್ದನು” ಎಂದು ತನ್ನೊಳಗೇ ಅಂದುಕೊಂಡನು.
40ಅದಕ್ಕೆ ಯೇಸು, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ಮಾತದೆ” ಅಂದಾಗ ಸೀಮೋನನು, “ಬೋಧಕನೇ, ಹೇಳು” ಅಂದನು.
41ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರುಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು.
42ತೀರಿಸುವುದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಮನ್ನಾಮಾಡಿ ಬಿಟ್ಟನು. ಹಾಗಾದರೆ ಅವರಿಬ್ಬರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸುವನು?” ಎಂದು ಕೇಳಿದ್ದಕ್ಕೆ,
43ಸೀಮೋನನು, “ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ” ಅಂದನು. ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪುಮಾಡಿದಿ” ಎಂದು ಹೇಳಿ,