11ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು.
12ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, “ನಿನ್ನ ರೋಗವು ಬಿಡುಗಡೆಯಾಯಿತು” ಎಂದು ಹೇಳಿ
13ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು.
14ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, “ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ” ಎಂದು ಹೇಳಿದನು.
15ಆ ಮಾತನ್ನು ಕೇಳಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ.
16ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು.
17ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.