1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ಆಸಾಫನ ಕೀರ್ತನೆ. ದೇವರಿಗೆ ಮೊರೆಯಿಡುವೆನು, ಕೂಗಿ ಮೊರೆಯಿಡುವೆನು; ಆತನು ನನಗೆ ಕಿವಿಗೊಡುವನು.
2ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು; ಬೇಸರವಿಲ್ಲದೆ ರಾತ್ರಿಯೆಲ್ಲಾ ಕೈಚಾಚಿಕೊಂಡೇ ಇದ್ದೆನು. ನನ್ನ ಮನಸ್ಸು ಶಾಂತಿಯನ್ನು ಹೊಂದಲೊಲ್ಲದೆ ಇತ್ತು.
3ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು; ಮನಗುಂದಿದವನಾಗಿಯೇ ಹಂಬಲಿಸುವೆನು.
4ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ. ತಳಮಳಗೊಂಡು ಮಾತನಾಡಲಾರದೆ ಇದ್ದೆನು.
5ಹಳೆಯ ದಿನಗಳನ್ನೂ, ಪುರಾತನ ವರ್ಷಗಳನ್ನೂ ಜ್ಞಾಪಕಮಾಡಿಕೊಂಡೆನು.
6ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಪಿಸಿಕೊಳ್ಳುವೆನು, ನನ್ನ ಆಂತರ್ಯದಲ್ಲಿ ಮಾತನಾಡಿಕೊಳ್ಳುವೆನು ಅಂದುಕೊಂಡು ನನ್ನ ಮನಸ್ಸಿನಲ್ಲಿ,
7“ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವುದಿಲ್ಲವೋ?