1ಯೆಹೋವನೇ, ನಿನ್ನನ್ನು ಮೊರೆಹೊಕ್ಕಿದ್ದೇನೆ; ಎಂದಿಗೂ ಅವಮಾನಕ್ಕೆ ಗುರಿಮಾಡಬೇಡ.
2ನಿನ್ನ ನೀತಿಗನುಸಾರವಾಗಿ ನನ್ನನ್ನು ಬಿಡಿಸಿ ಪಾರುಮಾಡು; ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಉದ್ಧರಿಸು.
3ನಾನು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರು; ನನ್ನ ರಕ್ಷಣೆಗೋಸ್ಕರ ಆಜ್ಞಾಪಿಸಿದ್ದೀಯಲ್ಲವೇ. ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ.
4ದೇವರೇ, ನನ್ನನ್ನು ದುಷ್ಟನ ಕೈಯಿಂದಲೂ, ಅನ್ಯಾಯ ಮತ್ತು ಹಿಂಸಕನ ವಶದಿಂದಲೂ ತಪ್ಪಿಸು.
5ಕರ್ತನಾದ ಯೆಹೋವನೇ, ಬಾಲ್ಯದಿಂದ ನನ್ನ ನಿರೀಕ್ಷೆಯೂ, ಭರವಸವೂ ನೀನಲ್ಲವೋ?
6ನಾನು ಹುಟ್ಟಿದಂದಿನಿಂದ ನಿನ್ನನ್ನೇ ಅವಲಂಬಿಸಿಕೊಂಡಿದ್ದೇನೆ. ತಾಯಿ ಹೆತ್ತಂದಿನಿಂದ ನನ್ನ ಉದ್ಧಾರಕನು ನೀನೇ. ನಾನು ಯಾವಾಗಲೂ ಹಿಗ್ಗುತ್ತಿರುವುದು ನಿನ್ನಲ್ಲಿಯೇ.
7ನನ್ನ ದುಸ್ಥಿತಿಯು ಅನೇಕರಿಗೆ ಒಂದು ಗುರುತಾಗಿದೆ; ಆದರೂ ನೀನು ನನಗೆ ಬಲವಾದ ಆಶ್ರಯಸ್ಥಾನವಾಗಿರುತ್ತೀ.