23ಅವರ ಕಣ್ಣು ಮೊಬ್ಬಾಗಿ ಕಾಣದೆ ಹೋಗಲಿ; ಅವರ ನಡುವು ಯಾವಾಗಲೂ ನಡಗುತ್ತಿರಲಿ.
24ನಿನ್ನ ರೌದ್ರವನ್ನು ಅವರ ಮೇಲೆ ಸುರಿದುಬಿಡು; ನಿನ್ನ ಕೋಪಾಗ್ನಿಯು ಅವರನ್ನು ದಹಿಸಲಿ.
25ಅವರ ಪಾಳೆಯವು ಹಾಳುಬೀಳಲಿ; ಅವರ ನಿವಾಸಗಳು ಜನಶೂನ್ಯವಾಗಲಿ.
26ನೀನು ಹೊಡೆದವನನ್ನು ಅವರು ಹಿಂಸಿಸುತ್ತಾರೆ; ನೀನು ಗಾಯಮಾಡಿದವರ ನೋವು ಅವರ ಪರಿಹಾಸ್ಯಕ್ಕೆ ಕಾರಣವಾಗಿದೆ.
27ಅವರ ಅಪರಾಧಗಳು ಒಂದೊಂದಾಗಿ ಹೆಚ್ಚುತ್ತಾ ಬರಲಿ. ನಿನ್ನ ನೀತಿಯಲ್ಲಿ ಅವರಿಗೆ ಪಾಲುಕೊಡಬೇಡ.
28ಜೀವಿತರ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕು, ಸದ್ಭಕ್ತರ ಹೆಸರಿನ ಸಂಗಡ ಅವರ ಹೆಸರು ಬರೆಯಲ್ಪಡದಿರಲಿ.
29ದೇವರೇ, ನೊಂದು ಕುಗ್ಗಿದವನಾದ ನನ್ನನ್ನಾದರೋ, ನಿನ್ನ ರಕ್ಷಣೆಯು ಭದ್ರಸ್ಥಳದಲ್ಲಿರಿಸುವುದು.
30ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು.
31ಇದು ಯೆಹೋವನಿಗೆ ಕೊಂಬುಗೊರಸುಗಳುಳ್ಳ, ಎಳೇ ಹೋರಿಗಳ ಯಜ್ಞಕ್ಕಿಂತ ಬಹು ಪ್ರಿಯವಾದದ್ದು.
32ದೀನರು ಇದನ್ನು ನೋಡಿ ಹರ್ಷಿಸುವರು. ದೇವದರ್ಶನವನ್ನು ಅಪೇಕ್ಷಿಸುವವರೇ, ನಿಮ್ಮ ಆತ್ಮವು ಉಜ್ಜೀವಿಸಲಿ.
33ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವುದಿಲ್ಲ.
34ಭೂಮ್ಯಾಕಾಶಗಳೂ, ಸಮುದ್ರಗಳೂ, ಜಲಚರಗಳೂ ಆತನನ್ನು ಕೊಂಡಾಡಲಿ.
35ದೇವರು ಚೀಯೋನ್ ಪಟ್ಟಣವನ್ನು ರಕ್ಷಿಸಿ, ಯೆಹೂದ ದೇಶದ ನಗರಗಳನ್ನು ಕಟ್ಟಿಸುವನು; ಆತನ ಪ್ರಜೆಗಳು ಅಲ್ಲಿ ವಾಸಮಾಡುತ್ತಾ ಅದನ್ನು ಸ್ವದೇಶವನ್ನಾಗಿ ಮಾಡಿಕೊಳ್ಳುವರು.