1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಶೋಶನ್ನೀಮೆಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ. ದೇವರೇ, ರಕ್ಷಿಸು; ಜಲವು ನನ್ನ ಕುತ್ತಿಗೆಯವರೆಗೂ ಏರಿಬಂದಿದೆ.
2ಆಳವಾದ ಕೆಸರಿನಲ್ಲಿ ಕುಸಿಯುತ್ತಿದ್ದೇನೆ; ನೆಲೆ ಸಿಕ್ಕುತ್ತಿಲ್ಲ. ಜಲರಾಶಿಯೊಳಗೆ ಮುಳುಗುತ್ತಿದ್ದೇನೆ; ಪ್ರವಾಹವು ನನ್ನನ್ನು ಹೊಡೆದುಕೊಂಡು ಹೋಗುತ್ತಿದೆ.
3ಮೊರೆಯಿಟ್ಟು ಬೇಸತ್ತು ಹೋಗಿದ್ದೇನೆ; ಗಂಟಲು ಒಣಗಿಹೋಯಿತು. ನನ್ನ ದೇವರನ್ನು ನಿರೀಕ್ಷಿಸುತ್ತಾ ಕಣ್ಣುಗಳು ಕ್ಷೀಣಿಸುತ್ತವೆ.
4ನಿಷ್ಕಾರಣ ದ್ವೇಷಿಗಳು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ; ನಿರಾಕಾರಣವಾಗಿ ನನ್ನನ್ನು ಮುಗಿಸಿಬಿಡಬೇಕೆಂದಿರುವ ವೈರಿಗಳು ಬಲಿಷ್ಠರಾಗಿದ್ದಾರೆ. ನಾನು ಅಪಹರಿಸದಿದ್ದರೂ ನನ್ನಿಂದ ದಂಡ ತೆಗೆದುಕೊಂಡರಲ್ಲಾ.
5ದೇವರೇ, ನನ್ನ ಮೂರ್ಖತನವು ನಿನಗೆ ಗೊತ್ತು; ನನ್ನ ಅಪರಾಧಗಳು ನಿನಗೆ ಮರೆಯಾಗಿಲ್ಲ.
6ಸೇನಾಧೀಶ್ವರನೇ, ಯೆಹೋವನೇ, ನಿನ್ನನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿನ್ನ ದರ್ಶನವನ್ನು ಬಯಸುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.
7ನಿನಗೋಸ್ಕರವಾಗಿ ನಿಂದೆಗೆ ಒಳಗಾದೆನಲ್ಲಾ; ನಾಚಿಕೆಯು ನನ್ನ ಮುಖವನ್ನು ಕವಿದಿದೆ.
8ನನ್ನ ಅಣ್ಣತಮ್ಮಂದಿರಿಗೆ ಅಪರಿಚಿತನಂತಾದೆನು; ಒಡಹುಟ್ಟಿದವರಿಗೆ ಪರದೇಶಿಯಂತೆ ಇದ್ದೇನೆ.
9ನಿನ್ನ ಆಲಯದ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ. ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬಂದಿವೆ.
10ನಾನು ದುಃಖದಿಂದ ಅತ್ತು ಉಪವಾಸ ಮಾಡಿ ನನ್ನ ಆತ್ಮವನ್ನು ಕುಗ್ಗಿಸಿಕೊಂಡಿದ್ದೇನೆ, ಪರಿಹಾಸ್ಯಕ್ಕೆ ಕಾರಣವಾಯಿತು.
11ನಾನು ಗೋಣಿತಟ್ಟು ಕಟ್ಟಿಕೊಂಡದ್ದು, ಅವರ ಗಾದೆಗೆ ಆಸ್ಪದವಾಯಿತು.
12ಊರ ಬಾಗಿಲಲ್ಲಿ ಕುಳಿತುಕೊಳ್ಳುವವರ ಆಡು ಮಾತಿಗೆ ಗುರಿಯಾಗಿದ್ದೇನೆ. ಕುಡುಕರು ನನ್ನ ವಿಷಯವನ್ನು ಹಾಡಿ ಪರಿಹಾಸ್ಯ ಮಾಡುತ್ತಾರೆ.
13ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ; ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ, ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು.
14ನಾನು ಕೆಸರಿನಲ್ಲಿ ಮುಳುಗಿಹೋಗದಂತೆ ಮೇಲೆತ್ತು; ವೈರಿಗಳ ಕೈಯೊಳಗಿಂದ ಬಿಡಿಸು; ಮಹಾಜಲರಾಶಿಯಿಂದ ಎಳೆದುಕೋ.