3ಶೂರನೇ, ಮಹಿಮೆ ಮತ್ತು ಪ್ರಭಾವವನ್ನು ಧರಿಸಿಕೊಂಡು, ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ.
4ಸತ್ಯತೆ, ದೈನ್ಯ, ನೀತಿಗಳನ್ನು ಸ್ಥಾಪಿಸುವುದಕ್ಕಾಗಿ ಸಕಲ ವೈಭವದೊಡನೆ ವಾಹನರೂಢನಾಗಿ, ವಿಜಯೋತ್ಸವದೊಡನೆ ಹೊರಡು. ನಿನ್ನ ಬಲಗೈ ಭಯಂಕರ ಕೃತ್ಯಗಳನ್ನು ನಡೆಸಲಿ.
5ನಿನ್ನ ಬಾಣಗಳು ಮಹಾತೀಕ್ಷ್ಣವಾಗಿರುವವು; ಅವು ರಾಜನ ಶತ್ರುಗಳ ಎದೆಯನ್ನು ಭೇದಿಸುವವು; ಶತ್ರುಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು.
6ದೇವರು ನಿನಗೆ ಕೊಟ್ಟಿರುವ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನಿನ್ನ ರಾಜದಂಡವು ನ್ಯಾಯ ದಂಡವಾಗಿದೆ.
7ನೀನು ಧರ್ಮವನ್ನು ಪ್ರೀತಿಸುತ್ತಿ, ಅಧರ್ಮವನ್ನು ದ್ವೇಷಿಸುತ್ತಿ; ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ, ಉನ್ನತಸ್ಥಾನಕ್ಕೆ ಏರಿಸಿ, ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.
8ನಿನ್ನ ವಸ್ತ್ರಗಳೆಲ್ಲಾ ರಕ್ತಬೋಳ, ದಾಲ್ಚಿನ್ನಿ, ಚಂದನಗಳಿಂದ ಎಷ್ಟೋ ಸುವಾಸನೆಯುಳ್ಳವುಗಳಾಗಿವೆ; ಗಜದಂತ ಅರಮನೆಗಳೊಳಗೆ ಉತ್ಕೃಷ್ಟವಾದ ವಾದ್ಯಗಳು ನಿನ್ನನ್ನು ಆನಂದಗೊಳಿಸುತ್ತವೆ.
9ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ; ಪಟ್ಟದ ರಾಣಿಯು ಓಫೀರ್ ದೇಶದ ಬಂಗಾರದ ಆಭರಣಗಳಿಂದ ಅಲಂಕೃತಳಾಗಿ, ನಿನ್ನ ಬಲಭಾಗದಲ್ಲಿ ನಿಂತಿರುವಳು.
10ಎಲೌ ರಾಜಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು; ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು.
11ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲು ಅಪೇಕ್ಷಿಸುವನು. ಆತನೇ ನಿನಗೆ ಒಡೆಯನು; ಆತನನ್ನು ಗೌರವಿಸು.
12ತೂರ್ ಸಂಸ್ಥಾನದವರು ಕಾಣಿಕೆಗಳೊಂದಿಗೆ ಬರುವರು; ಪ್ರಜೆಗಳಲ್ಲಿ ಐಶ್ವರ್ಯವಂತರು ನಿನ್ನ ದಯೆಯನ್ನು ಕೋರುವರು.
13ಅಂತಃಪುರದಲ್ಲಿ ರಾಜಕುಮಾರಿಯು ಎಷ್ಟೋ ವೈಭವದಿಂದಿದ್ದಾಳೆ; ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14ಆಕೆಯು ಬೂಟೇದಾರಿ ವಸ್ತ್ರಗಳನ್ನು ಧರಿಸಿಕೊಂಡು, ಅವಳ ಸೇವೆಗಾಗಿ ಕನ್ಯೆಯರಾದ ಸಖೀಯರು ಅವಳನ್ನು ಹಿಂಬಾಲಿಸಿ, ಅರಸನ ಬಳಿಗೆ ಬರುವರು.
15ಅವರು ಉಲ್ಲಾಸದಿಂದಲೂ, ಸಂತೋಷದಿಂದಲೂ ಬಂದು, ಅರಮನೆಯೊಳಗೆ ಪ್ರವೇಶಿಸುವರು.
16ನಿನ್ನ ಪೂರ್ವಿಕರ ಸ್ಥಳಗಳಲ್ಲಿ ನಿನ್ನ ಮಕ್ಕಳು ಇರುವರು; ನೀನು ಅವರನ್ನು ಭೂಮಿಯ ಮೇಲೆಲ್ಲಾ ಅಧಿಕಾರಿಗಳನ್ನಾಗಿ ನೇಮಿಸುವಿ.
17ನಿನ್ನ ಹೆಸರು ತಲತಲಾಂತರಗಳಲ್ಲಿ ಜ್ಞಾಪಕವಿರುವಂತೆ ನಾನು ಮಾಡುವೆನು; ಅದುದರಿಂದ ಎಲ್ಲಾ ಜನಗಳು ನಿನ್ನನ್ನು ಯುಗಯುಗಾಂತರಗಳಲ್ಲಿಯೂ ಪ್ರಶಂಸಿಸುವರು.