2ನೀನು ಎಲ್ಲಾ ಮನುಷ್ಯರಿಗಿಂತ ಅತಿಸುಂದರನು; ನಿನ್ನ ಮಾತುಗಳು ಬಹು ಮಧುರ; ಇದರಿಂದಲೇ ದೈವಾನುಗ್ರಹವು ಯಾವಾಗಲೂ ನಿನ್ನ ಮೇಲಿದೆ ಎಂಬುದು ಸ್ವಷ್ಟವಾಗುತ್ತದೆ.
3ಶೂರನೇ, ಮಹಿಮೆ ಮತ್ತು ಪ್ರಭಾವವನ್ನು ಧರಿಸಿಕೊಂಡು, ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ.
4ಸತ್ಯತೆ, ದೈನ್ಯ, ನೀತಿಗಳನ್ನು ಸ್ಥಾಪಿಸುವುದಕ್ಕಾಗಿ ಸಕಲ ವೈಭವದೊಡನೆ ವಾಹನರೂಢನಾಗಿ, ವಿಜಯೋತ್ಸವದೊಡನೆ ಹೊರಡು. ನಿನ್ನ ಬಲಗೈ ಭಯಂಕರ ಕೃತ್ಯಗಳನ್ನು ನಡೆಸಲಿ.
5ನಿನ್ನ ಬಾಣಗಳು ಮಹಾತೀಕ್ಷ್ಣವಾಗಿರುವವು; ಅವು ರಾಜನ ಶತ್ರುಗಳ ಎದೆಯನ್ನು ಭೇದಿಸುವವು; ಶತ್ರುಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು.
6ದೇವರು ನಿನಗೆ ಕೊಟ್ಟಿರುವ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನಿನ್ನ ರಾಜದಂಡವು ನ್ಯಾಯ ದಂಡವಾಗಿದೆ.
7ನೀನು ಧರ್ಮವನ್ನು ಪ್ರೀತಿಸುತ್ತಿ, ಅಧರ್ಮವನ್ನು ದ್ವೇಷಿಸುತ್ತಿ; ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ, ಉನ್ನತಸ್ಥಾನಕ್ಕೆ ಏರಿಸಿ, ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.