11ನನ್ನ ಎಲ್ಲಾ ಹಿಂಸಕರ ದೆಸೆಯಿಂದ ದೂಷಣೆಗೆ ಗುರಿಯಾದೆನು; ವಿಶೇಷವಾಗಿ ನೆರೆಯವರು ನನ್ನನ್ನು ನಿಂದಿಸುತ್ತಾರೆ. ನನ್ನ ಪರಿಚಿತರಿಗೆ ನನ್ನಲ್ಲಿ ಭೀತಿಯುಂಟಾಯಿತು; ನನ್ನನ್ನು ದಾರಿಯಲ್ಲಿ ಕಂಡವರೆಲ್ಲರು ಓರೆಯಾಗಿ ಹೋಗುತ್ತಾರೆ.
12ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು; ಒಡೆದ ಬೋಕಿಯಂತಿದ್ದೇನೆ.
13ಅನೇಕರು ನನ್ನ ಪ್ರಾಣ ತೆಗೆಯಬೇಕೆಂದು ಒಳ ಸಂಚುಮಾಡುತ್ತಿದ್ದಾರೆ; ಅವರು ಪಿಸುಗುಟ್ಟುವ ಮಾತುಗಳು ನನ್ನ ಕಿವಿಗೆ ಬಿದ್ದಿವೆ; ಎಲ್ಲಾ ಕಡೆಯಲ್ಲಿಯೂ ನನಗೆ ಭೀತಿಯುಂಟಾಗಿದೆ.
14ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ.
15ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿದೆ; ಹಿಂದಟ್ಟುವ ಶತ್ರುಗಳಿಂದ ನನ್ನನ್ನು ತಪ್ಪಿಸಿ ಕಾಪಾಡು.
16ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು; ಪ್ರೀತಿಯಿಂದ ನನ್ನನ್ನು ರಕ್ಷಿಸು.
17ಯೆಹೋವನೇ, ಮೊರೆಯಿಟ್ಟಿದ್ದೇನೆ; ನನ್ನನ್ನು ನಿರಾಶೆಪಡಿಸಬೇಡ. ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ.
18ಯಾರು ನೀತಿವಂತರನ್ನು ತಾತ್ಸಾರಮಾಡಿ ಗರ್ವದಿಂದಲೂ, ಕೊಬ್ಬಿನಿಂದಲೂ ಅವರಿಗೆ ವಿರುದ್ಧವಾಗಿ ಸುಳ್ಳು ಹೇಳುತ್ತಾರೋ ಅವರ ತುಟಿಗಳು ಮುಚ್ಚಿಹೋಗಲಿ.
19ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲೂ, ಆಶ್ರಿತರಿಗೋಸ್ಕರ ನೀನು ಎಲ್ಲರ ಮುಂದೆ ಮಾಡಿದ ಉಪಕಾರಗಳೂ ಎಷ್ಟೋ ವಿಶೇಷವಾಗಿವೆ.
20ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ಅವರನ್ನು ನಿನ್ನ ಸಾನ್ನಿಧ್ಯದಲ್ಲಿಯೇ ಮರೆಮಾಡುತ್ತೀ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ಗುಪ್ತಸ್ಥಳದಲ್ಲಿ ಅಡಗಿಸುತ್ತೀ.