5ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡೆಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.
6ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ, ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ.
7ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ, ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ.
8ಯೆಹೋವನು ದಯಾಳುವೂ, ಸತ್ಯಸ್ವರೂಪನೂ ಆಗಿದ್ದಾನೆ; ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವನು.
9ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.
10ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ, ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು.
11ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ; ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು.
12ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವರೋ ಅವರಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು.
13ಅವರು ಸುಖದಿಂದಲೇ ಇರುವರು; ಅವರ ಸಂತತಿಯವರು ದೇಶವನ್ನು ಅನುಭವಿಸುವರು.
14ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು; ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.
15ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ; ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು.
16ನಾನು ಒಬ್ಬೊಂಟಿಗನೂ, ಬಾಧೆಪಡುವವನೂ ಆಗಿದ್ದೇನೆ; ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು.
17ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು.