Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 20

1 ಅರಸು 20:25-35

Help us?
Click on verse(s) to share them!
25ಅನಂತರ ನಮ್ಮ ಸೈನ್ಯದಿಂದ ನಷ್ಟವಾಗಿ ಹೋದಷ್ಟು ಜನರನ್ನು, ಕುದುರೆಗಳನ್ನೂ, ರಥಗಳನ್ನೂ ತಿರುಗಿ ಕೂಡಿಸಿ ಅವರೊಡನೆ ಬಯಲಿನಲ್ಲಿ ಯುದ್ಧಮಾಡೋಣ. ನಮಗೆ ಹೇಗೂ ಜಯಸಿಕ್ಕುವುದು ನಿಶ್ಚಯ” ಎಂದು ಹೇಳಿದನು. ಅವನು ಅದರಂತೆಯೇ ಮಾಡಿದನು.
26ಒಂದು ವರ್ಷ ದಾಟಿದ ನಂತರ ಬೆನ್ಹದದನು ಅರಾಮ್ಯರನ್ನು ಕೂಡಿಸಿಕೊಂಡು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಅಫೇಕಕ್ಕೆ ಹೋದನು.
27ಇಸ್ರಾಯೇಲರು ಸಹ ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಅವರಿಗೆ ವಿರುದ್ಧವಾಗಿ ಬಂದರು. ಅರಾಮ್ಯರು ದೇಶದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿರುವ ಇಸ್ರಾಯೇಲರು ಅವರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.
28ಆಗ ದೇವರ ಮನುಷ್ಯನು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಯೆಹೋವನು ಹೀಗೆನ್ನುತ್ತಾನೆ, ಯೆಹೋವನು ತಗ್ಗುಗಳ ದೇವರಲ್ಲ. ಬೆಟ್ಟಗಳ ದೇವರಾಗಿರುತ್ತಾನೆ ಅಂದುಕೊಂಡು ಬಂದಿರುವ ಈ ಅರಾಮ್ಯರ ಮಹಾ ಸಮೂಹವನ್ನು ನಿನ್ನ ಕೈಗೆ ಒಪ್ಪಿಸುವೆನು. ಇದರಿಂದ ನಾನು ಯೆಹೋವನೇ ಎಂದು ನಿನಗೆ ಗೊತ್ತಾಗುವುದು” ಎಂದು ಹೇಳಿದನು.
29ಈ ಎರಡು ಸೈನ್ಯಗಳು ಏಳು ದಿನಗಳ ವರೆಗೆ ಎದುರುಬದುರಾಗಿ ಪಾಳೆಯ ಮಾಡಿಕೊಂಡಿದ್ದವು. ಏಳನೆಯ ದಿನದಲ್ಲಿ ಯುದ್ಧ ಪ್ರಾರಂಭವಾಗಲು ಇಸ್ರಾಯೇಲರು ಆ ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಕಾಲಾಳುಗಳನ್ನು ವಧಿಸಿದರು.
30ಉಳಿದ ಇಪ್ಪತ್ತೇಳು ಸಾವಿರ ಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು. ಆದರೆ ಆ ಪಟ್ಟಣದ ಗೋಡೆಯು ಅವರ ಮೇಲೆ ಬಿದ್ದುದರಿಂದ ಅವರೂ ಸತ್ತರು. ಬೆನ್ಹದದನು ಆ ಪಟ್ಟಣವನ್ನು ಹೊಕ್ಕು ಒಂದು ಮನೆಯ ಒಳಕೋಣೆಯಲ್ಲಿ ಬಚ್ಚಿಟ್ಟುಕೊಂಡನು.
31ಆಗ ಅವನ ಸೇವಕರು ಅವನಿಗೆ, “ಇಸ್ರಾಯೇಲರ ಅರಸರು ದಯೆಯುಳ್ಳವರೆಂದು ನಾವು ಕೇಳಿದ್ದೇವೆ. ಆದುದರಿಂದ ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಆ ಅರಸನ ಬಳಿ ಹೋಗುವುದಕ್ಕೆ ನಮಗೆ ಅಪ್ಪಣೆಯಾಗಲಿ. ಹೀಗೆ ಮಾಡುವುದಾದರೆ ಅವನು ನಿನ್ನ ಜೀವವನ್ನು ಉಳಿಸಾನು” ಎಂದು ಹೇಳಿದರು.
32ಅವರು ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ನನಗೆ ಜೀವದಾನಮಾಡಬೇಕು ಎಂದು ನಿನ್ನ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ” ಅಂದರು. ಆಗ ಅವನು, “ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು” ಎಂದು ಉತ್ತರಕೊಟ್ಟನು.
33ಅವರು ಈ ಮಾತು ಶುಭವಚನವೆಂದು ನೆನಸಿ ಕೂಡಲೆ ಅವನ ಮಾತನ್ನೇ ಹಿಡಿದು, “ಬೆನ್ಹದದನು ನಿನ್ನ ಸಹೋದರನೇ ಹೌದು” ಅಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಲು ಅವನು ಬಂದಾಗ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
34ಬೆನ್ಹದದನು ಅವನಿಗೆ, “ನನ್ನ ತಂದೆಯು ನಿನ್ನ ತಂದೆಯಿಂದ ಕಿತ್ತುಕೊಂಡ ಪಟ್ಟಣಗಳನ್ನು ನಾನು ಹಿಂದಕ್ಕೆ ಕೊಡುತ್ತೇನೆ, ಅವನು ಸಮಾರ್ಯದಲ್ಲಿ ಮಾಡಿದಂತೆ ನೀನು ನಿನಗೋಸ್ಕರ ದಮಸ್ಕದಲ್ಲಿ ಕೆಲವು ಕೇರಿಗಳನ್ನು ನಿನ್ನದಾಗಿಸಿಕೊಳ್ಳಬಹುದು” ಎಂದು ಹೇಳಿದನು. ಆಗ ಅಹಾಬನು, “ನಾನು ಈ ಒಪ್ಪಂದದ ಮೇಲೆ ನಿನ್ನನ್ನು ಬಿಟ್ಟುಬಿಡುತ್ತೇನೆ” ಎಂದು ಹೇಳಿ ಅವನಿಂದ ಪ್ರಮಾಣ ಮಾಡಿಸಿ ಕಳುಹಿಸಿಬಿಟ್ಟನು.
35ಪ್ರವಾದಿಮಂಡಳಿಯಲ್ಲಿ ಒಬ್ಬನು ಯೆಹೋವನ ಆತ್ಮ ಪ್ರೇರಿತನಾಗಿ ತನ್ನ ಜೊತೆಗಾರನಿಗೆ “ನನ್ನನ್ನು ಹೊಡಿ” ಎಂದು ಹೇಳಿದನು. ಅದಕ್ಕೆ ಅವನು ಒಪ್ಪಲಿಲ್ಲ.

Read 1 ಅರಸು 201 ಅರಸು 20
Compare 1 ಅರಸು 20:25-351 ಅರಸು 20:25-35