Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 20

1 ಅರಸು 20:15-29

Help us?
Click on verse(s) to share them!
15ಅಹಾಬನು ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳನ್ನು ಲೆಕ್ಕಿಸಿದಾಗ ಇನ್ನೂರ ಮೂವತ್ತೆರಡು ಜನರಿದ್ದರು. ಇಸ್ರಾಯೇಲರ ಸೈನ್ಯವನ್ನು ಲೆಕ್ಕಿಸಿದಾಗ ಏಳು ಸಾವಿರ ಜನರಿದ್ದರು.
16ಮಧ್ಯಾಹ್ನದಲ್ಲಿ ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಜನರು ಅರಸರ ಸಂಗಡ ಮದ್ಯಪಾನ ಮಾಡಿ ಮತ್ತರಾಗಿ ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
17ಪ್ರದೇಶಾಧಿಪತಿಗಳ ಆಳುಗಳು ಮೊದಲು ಬಂದರು. ಸಮಾರ್ಯದ ಜನರು ಹೊರಗೆ ಬಂದಿರುತ್ತಾರೆಂದು ಬೆನ್ಹದದನ ಕಾವಲುಗಾರರು ಅವನಿಗೆ ತಿಳಿಸಿದರು.
18ಅವನು ಅವರಿಗೆ, “ಅವರು ಯುದ್ಧಕ್ಕಾಗಿ ಬಂದಿದ್ದರೂ ಸಮಾಧಾನಕ್ಕಾಗಿ ಬಂದಿದ್ದರೂ ಅವರನ್ನು ಸಜೀವಿಗಳನ್ನಾಗಿ ಹಿಡಿದು ತನ್ನಿರಿ” ಎಂದು ಆಜ್ಞಾಪಿಸಿದನು.
19ಮೊದಲು ಹೊರಟುಬಂದಿದ್ದ ದೇಶಾಧಿಪತಿಗಳ ಆಳುಗಳ ಹಿಂದೆ ಇಸ್ರಾಯೇಲ್ ಸೈನ್ಯದವರೂ ಬಂದರು.
20ಅವರಲ್ಲಿ ಪ್ರತಿಯೊಬ್ಬನೂ ತನ್ನ ಎದುರಿಗೆ ಬಂದ ವಿರೋಧಿಯನ್ನು ಕೊಲ್ಲುತ್ತಾ ಮುಂದುವರಿದರು. ಅರಾಮ್ಯರು ಓಡಿಹೋಗಲು ಇಸ್ರಾಯೇಲರು ಅವರನ್ನು ಹಿಂದಟ್ಟಿದರು. ಅವರ ಅರಸನಾದ ಬೆನ್ಹದದನೂ ಹಾಗು ಕೆಲವು ಸವಾರರೂ ಕುದುರೆಗಳನ್ನೇರಿ ಓಡಿಹೋಗಿ ತಪ್ಪಿಸಿಕೊಂಡರು.
21ಇಸ್ರಾಯೇಲರ ಅರಸನು ಹೊರಟು ಬಂದು ಅರಾಮ್ಯರ ರಥಾಶ್ವಬಲಗಳನ್ನು ಸೋಲಿಸಿ ಮಹಾಸಮೂಹವನ್ನು ಸಂಹರಿಸಿದನು.
22ಆಗ ಪ್ರವಾದಿಯು ಪುನಃ ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಅರಾಮ್ಯರ ಅರಸನು ಮುಂದಿನ ವರ್ಷದಲ್ಲಿ ಇನ್ನೊಮ್ಮೆ ನಿನಗೆ ವಿರುದ್ಧವಾಗಿ ಬರುತ್ತಾನೆ. ಆದುದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ, ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬುದನ್ನು ಆಲೋಚಿಸು” ಎಂದನು.
23ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ, “ಇಸ್ರಾಯೇಲ್ ದೇವರು ಬೆಟ್ಟಗಳ ದೇವರಾಗಿರುವುದರಿಂದ ಅವರು ನಮ್ಮನ್ನು ಸೋಲಿಸಿದರು. ನಾವು ಅವರೊಡನೆ ಬಯಲಿನಲ್ಲಿ ಯುದ್ಧಮಾಡುವುದಾದರೆ ಹೇಗೂ ಜಯಹೊಂದುವೆವು.
24ನೀನು ಆಯಾ ಸ್ಥಳಗಳಲ್ಲಿರುವ ಅರಸರನ್ನು ತೆಗೆದುಹಾಕಿ ಅವರಿಗೆ ಬದಲಾಗಿ ಪ್ರದೇಶಾಧಿಪತಿಗಳನ್ನು ನೇಮಿಸು.
25ಅನಂತರ ನಮ್ಮ ಸೈನ್ಯದಿಂದ ನಷ್ಟವಾಗಿ ಹೋದಷ್ಟು ಜನರನ್ನು, ಕುದುರೆಗಳನ್ನೂ, ರಥಗಳನ್ನೂ ತಿರುಗಿ ಕೂಡಿಸಿ ಅವರೊಡನೆ ಬಯಲಿನಲ್ಲಿ ಯುದ್ಧಮಾಡೋಣ. ನಮಗೆ ಹೇಗೂ ಜಯಸಿಕ್ಕುವುದು ನಿಶ್ಚಯ” ಎಂದು ಹೇಳಿದನು. ಅವನು ಅದರಂತೆಯೇ ಮಾಡಿದನು.
26ಒಂದು ವರ್ಷ ದಾಟಿದ ನಂತರ ಬೆನ್ಹದದನು ಅರಾಮ್ಯರನ್ನು ಕೂಡಿಸಿಕೊಂಡು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಅಫೇಕಕ್ಕೆ ಹೋದನು.
27ಇಸ್ರಾಯೇಲರು ಸಹ ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಅವರಿಗೆ ವಿರುದ್ಧವಾಗಿ ಬಂದರು. ಅರಾಮ್ಯರು ದೇಶದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರು. ಆಡುಮರಿಗಳ ಎರಡು ಹಿಂಡುಗಳಂತಿರುವ ಇಸ್ರಾಯೇಲರು ಅವರ ಎದುರಿನಲ್ಲಿ ಪಾಳೆಯ ಮಾಡಿಕೊಂಡರು.
28ಆಗ ದೇವರ ಮನುಷ್ಯನು ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಯೆಹೋವನು ಹೀಗೆನ್ನುತ್ತಾನೆ, ಯೆಹೋವನು ತಗ್ಗುಗಳ ದೇವರಲ್ಲ. ಬೆಟ್ಟಗಳ ದೇವರಾಗಿರುತ್ತಾನೆ ಅಂದುಕೊಂಡು ಬಂದಿರುವ ಈ ಅರಾಮ್ಯರ ಮಹಾ ಸಮೂಹವನ್ನು ನಿನ್ನ ಕೈಗೆ ಒಪ್ಪಿಸುವೆನು. ಇದರಿಂದ ನಾನು ಯೆಹೋವನೇ ಎಂದು ನಿನಗೆ ಗೊತ್ತಾಗುವುದು” ಎಂದು ಹೇಳಿದನು.
29ಈ ಎರಡು ಸೈನ್ಯಗಳು ಏಳು ದಿನಗಳ ವರೆಗೆ ಎದುರುಬದುರಾಗಿ ಪಾಳೆಯ ಮಾಡಿಕೊಂಡಿದ್ದವು. ಏಳನೆಯ ದಿನದಲ್ಲಿ ಯುದ್ಧ ಪ್ರಾರಂಭವಾಗಲು ಇಸ್ರಾಯೇಲರು ಆ ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಕಾಲಾಳುಗಳನ್ನು ವಧಿಸಿದರು.

Read 1 ಅರಸು 201 ಅರಸು 20
Compare 1 ಅರಸು 20:15-291 ಅರಸು 20:15-29