3ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು.
4ಇದಲ್ಲದೆ ಆ ಊರಿನಿಂದ ಹೊರಡುವ ತನಕ ನೀವು ಯಾವ ಮನೆಯಲ್ಲಿ ಇಳಿದುಕೊಂಡಿರುವಿರೋ, ಆ ಮನೆಯಲ್ಲೇ ಉಳಿದುಕೊಳ್ಳಿರಿ.
5ಮತ್ತು ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದೆ ಹೋದರೆ ಆ ಊರನ್ನು ನೀವು ಬಿಟ್ಟುಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಅಂದನು.
6ಆಗ ಅವರು ಹೊರಟು ಗ್ರಾಮಗಳಿಗೆ ಹೋಗಿ, ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿಯೂ ರೋಗಿಗಳನ್ನು ವಾಸಿಮಾಡುತ್ತಿದ್ದರು.
7ಹೀಗಿರಲಾಗಿ ಉಪರಾಜನಾದ ಹೆರೋದನು ನಡೆದ ಸಂಗತಿಗಳನ್ನೆಲ್ಲಾ ಕೇಳಿ ಬಹಳವಾಗಿ ಕಳವಳಗೊಂಡನು, ಏಕೆಂದರೆ ಸತ್ತಿದ್ದ ಯೋಹಾನನು ತಿರುಗಿ ಬದುಕಿಬಂದಿದ್ದಾನೆಂದು ಕೆಲವರೂ,
8ಎಲೀಯನು ಕಾಣಿಸಿಕೊಂಡನೆಂದು ಕೆಲವರೂ, ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆಂದು ಮತ್ತೆ ಕೆಲವರೂ ಹೇಳಿಕೊಳ್ಳುತ್ತಿದ್ದರು.
9ಆದರೆ ಹೆರೋದನು, “ಯೋಹಾನನನ್ನು ನಾನೇ ಶಿರಚ್ಛೇದನಮಾಡಿಸಿದೆನಷ್ಟೆ. ಹಾಗಿದ್ದಲಿ ಇವನಾರು? ಇವನ ವಿಷಯವಾಗಿ ಆಶ್ಚರ್ಯಕರವಾದ ಸಂಗತಿಗಳನ್ನು ಕೇಳುತ್ತೇನಲ್ಲಾ” ಎಂದು ಹೇಳಿ ಅವನನ್ನು ನೋಡಬೇಕೆಂದು ಪ್ರಯತ್ನಿಸಿದನು.
10ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಿದರು. ಆತನು ಅವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬೇತ್ಸಾಯಿದವೆಂಬ ಊರಿಗೆ ಹೋದರು.
11ಜನರ ಗುಂಪು ಇದನ್ನು ತಿಳಿದು ಯೇಸುವಿನ ಹಿಂದೆ ಬರಲು ಆತನು ಅವರನ್ನು ಪ್ರೀತಿಯಿಂದ ಸೇರಿಸಿಕೊಂಡು ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಅಗತ್ಯವಿದ್ದವರನ್ನು ಗುಣಪಡಿಸಿದನು.
12ಸಂಜೆಯಾಗುತ್ತಿರಲು, ಆ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೋಸ್ಕರ ಊಟವಸತಿಗಳನ್ನು ಏರ್ಪಡಿಸಿಕೊಳ್ಳಲಿ; ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಲಾಗಿ,
13ಆತನು, “ನೀವೇ ಅವರಿಗೆ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು.
14ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು,
15ಅವರು ಅದರಂತೆ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು.
16ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು.
17ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.
18ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು,
19ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು.
20ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
21ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು.
22ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು.
23ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
24ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.
25ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
26ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ, ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು.
27ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
28ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು.
29ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು.
30ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತನಾಡುತ್ತಿದ್ದರು. ಅವರು ಯಾರೆಂದರೆ ಮೋಶೆಯೂ ಎಲೀಯನೂ.
31ಅವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ಹೊಂದಬೇಕಾಗಿದ್ದ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.