14ಬರೀ ಗಾಳಿಯ ಮೋಡಗಳು ಹೇಗೋ, ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ.
15ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು, ಮೃದುವಚನವು ಎಲುಬನ್ನು ಮುರಿಯುವುದು.
16ಜೇನು ಸಿಕ್ಕಿತೋ? ಮಿತವಾಗಿ ತಿನ್ನು, ಹೊಟ್ಟೆತುಂಬಾ ತಿಂದರೆ ಕಾರಿಬಿಟ್ಟೀಯೇ.
17ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ, ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.
18ನೆರೆಯವನ ಮೇಲೆ ಸುಳ್ಳುಸಾಕ್ಷಿಹೇಳುವವನು, ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ.
19ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, ಮುರುಕಹಲ್ಲು ಮತ್ತು ಜಾರುವ ಕಾಲು.
20ಮನಗುಂದಿದವನಿಗೆ ಸಂಗೀತಹಾಡುವುದು ಚಳಿದಿನದಲ್ಲಿ ಬಟ್ಟೆ ತೆಗೆದಂತೆ, ಗಾಯಕ್ಕೆ ಹುಳಿಹೊಯ್ದಂತೆ.
21ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು,
22ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಯೆಹೋವನೇ ನಿನಗೆ ಪ್ರತಿಫಲಕೊಡುವನು.
23ಉತ್ತರದ ಗಾಳಿ ಮಳೆ ಬರಮಾಡುವುದು, ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು.
24ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.
25ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.