1ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಅವರ ಸಹವಾಸವನ್ನು ಬಯಸಬೇಡ.
2ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವುದು, ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವುದು.
3ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ,
4ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, ತಿಳಿವಳಿಕೆಯೇ ಉಪಕರಣ.
5ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ.
6ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು, ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವುದು.
7ಜ್ಞಾನವು ಮೂರ್ಖನಿಗೆ ನಿಲುಕದು, ಅವನು ನ್ಯಾಯಸ್ಥಾನದಲ್ಲಿ ಬಾಯಿಬಿಡಲಾರನು.
8ಕೇಡನ್ನು ಕಲ್ಪಿಸುವವನು, ಕುಯುಕ್ತಿಯುಳ್ಳವನು ಎನಿಸಿಕೊಳ್ಳುವನು.
9ಮೂರ್ಖನ ಸಂಕಲ್ಪವು ಪಾಪವೇ, ಧರ್ಮನಿಂದಕನು ಮನುಷ್ಯರಿಗೆ ಅಸಹ್ಯ.
10ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ, ನಿನ್ನ ಬಲವೂ ಇಕ್ಕಟ್ಟೇ.