11ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು.
12ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್, ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ.
13ನಿನ್ನ ಭುಜಬಲವು ಮಹಾಬಲವುಳ್ಳದ್ದು. ನಿನ್ನ ಹಸ್ತವು ಶಕ್ತಿಯುಳ್ಳದ್ದು; ನಿನ್ನ ಬಲಗೈ ಮಹತ್ತುಗಳನ್ನು ನಡೆಸುತ್ತದೆ.
14ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು; ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ.
15ಉತ್ಸಾಹಧ್ವನಿಯನ್ನು ತಿಳಿದಿರುವ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ.
16ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ.
17ಅವರು ಹಿಗ್ಗುವ ಬಲವು ನೀನೇ. ನಿನ್ನ ಕರುಣೆಯ ಕಟಾಕ್ಷದಿಂದ ನಮ್ಮ ಕೊಂಬು ಎತ್ತಲ್ಪಟ್ಟಿರುವುದು.
18ನಮಗೆ ಗುರಾಣಿಯಂತಿರುವ ನಮ್ಮ ಅರಸನು ಯೆಹೋವನೇ; ಅವನು ಇಸ್ರಾಯೇಲರ ಸದಮಲಸ್ವಾಮಿಯ, ಸ್ವಕೀಯನು.
19ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನೆಂದರೆ, “ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ; ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ.
20ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.
21ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.
22ವೈರಿಯ ಕುತಂತ್ರವು ಅವನಲ್ಲಿ ಸಾಗದು; ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು.
23ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು; ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು.
24ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು.
25ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು.
26ಅವನು ನನಗೆ, ‘ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ’ ಎಂದು ಹೇಳುವನು.
27ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ, ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.