1ಆಸಾಫನ ಪದ್ಯ. ನನ್ನ ಜನರೇ, ನನ್ನ ಉಪದೇಶವನ್ನು ಕೇಳಿರಿ; ನನ್ನ ನುಡಿಗಳನ್ನು ಕಿವಿಗೊಟ್ಟು ಲಾಲಿಸಿರಿ.
2ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು. ಪೂರ್ವಕಾಲದ ಗೂಢಾರ್ಥಗಳನ್ನು ಬಹಿರಂಗಪಡಿಸುವೆನು.
3ನಾವು ನಮ್ಮ ಹಿರಿಯರ ಬಾಯಿಂದ ತಿಳಿದ ಸಂಗತಿಗಳನ್ನು, ಅವರ ಸಂತಾನದವರಿಗೆ ಮರೆಮಾಡದೆ,
4ಯೆಹೋವನ ಘನತೆಯನ್ನು, ಆತನ ಪರಾಕ್ರಮವನ್ನು, ಅದ್ಭುತಕೃತ್ಯಗಳನ್ನು ಮುಂದಣ ಸಂತತಿಯವರಿಗೆ ವಿವರಿಸುವೆವು.
5ಆತನು ಯಾಕೋಬವಂಶದಲ್ಲಿ ತನ್ನ ಕಟ್ಟಳೆಯನ್ನಿಟ್ಟು, ಇಸ್ರಾಯೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟು, ನಮ್ಮ ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, “ಇವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ;
6ಇದರಿಂದ ಅವು ಅವರ ಮುಂದಿನ ಪೀಳಿಗೆಗೆ ಗೊತ್ತಾಗಿ, ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.
7ಆಗ ಅವರು ಮೊಂಡರೂ, ಅವಿಧೇಯರೂ, ಚಪಲಚಿತ್ತರೂ, ದೇವದ್ರೋಹಿಗಳೂ ಆದ ತಮ್ಮ ಪೂರ್ವಿಕರಂತೆ ಆಗದೆ,
8ನನ್ನ ಮಹತ್ಕಾರ್ಯಗಳನ್ನು ಮರೆಯದೆ, ನನ್ನಲ್ಲಿಯೇ ಭರವಸೆಯಿಟ್ಟು, ನನ್ನ ಆಜ್ಞೆಗಳನ್ನು ಕೈಗೊಳ್ಳುವರು” ಎಂಬುದೇ.
9ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸಿದ್ಧರಾಗಿ, ಯುದ್ಧಸಮಯದಲ್ಲಿ ಹಿಂದಿರುಗಿ ಓಡಿಹೋದರು.
10ಅವರು ದೇವರ ನಿಬಂಧನೆಯನ್ನು ಪಾಲಿಸಲಿಲ್ಲ, ಆತನ ಧರ್ಮಶಾಸ್ತ್ರವನ್ನು ಅನುಸರಿಸಲು ಮನಸ್ಸು ಮಾಡಲಿಲ್ಲ.
11ಆತನ ಕಾರ್ಯಗಳನ್ನು, ಆತನು ತಮ್ಮೆದುರಿನಲ್ಲಿ ನಡೆಸಿದ ಅದ್ಭುತಗಳನ್ನು ಮರೆತುಬಿಟ್ಟರು.
12ಆತನು ಐಗುಪ್ತದೇಶದ ಸೋನ್ ಸೀಮೆಯಲ್ಲಿ, ಅವರ ಪೂರ್ವಿಕರ ಸಮಕ್ಷದಲ್ಲಿಯೇ ಆಶ್ಚರ್ಯ ಕ್ರಿಯೆಗಳನ್ನು ನಡೆಸಿದನು.
13ಆತನು ಸಮುದ್ರವನ್ನು ವಿಭಾಗಿಸಿ, ಅದರ ನೀರನ್ನು ರಾಶಿಯಾಗಿ ನಿಲ್ಲುವಂತೆ ಮಾಡಿ, ಅವರನ್ನು ದಾಟಿಸಿದನು.
14ಹಗಲಿನಲ್ಲಿ ಮೋಡದಿಂದಲೂ, ರಾತ್ರಿಯಲ್ಲಿ ಬೆಂಕಿಯ ಬೆಳಕಿನಿಂದಲೂ, ಆತನು ಅವರನ್ನು ಕರೆದೊಯ್ದನು.
15ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ, ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು.
16ಗಿರಿಶಿಲೆಯಿಂದ ಜಲಪ್ರವಾಹಗಳನ್ನು ಹೊರಡಿಸಿ, ನದಿಗಳಾಗಿ ಹರಿಯಮಾಡಿದನು.
17ಆದರೂ ಅವರು ನಿರ್ಜಲಪ್ರದೇಶದಲ್ಲಿ ಪರಾತ್ಪರನಾದ ದೇವರಿಗೆ ಪದೇಪದೇ ಅವಿಧೇಯರಾಗಿ, ಇನ್ನೂ ಹೆಚ್ಚು ಪಾಪಮಾಡುತ್ತಾ ಬಂದರು.
18ಅವರು ಇಷ್ಟಭೋಜನವನ್ನು ಕೇಳಿಕೊಳ್ಳುವಾಗ, ಸಂಶಯ ಮನಸ್ಸಿನಿಂದ ದೇವರನ್ನು ಪರೀಕ್ಷಿಸಿದರು.
19ಅವರು ಆತನಿಗೆ ವಿರುದ್ಧವಾಗಿ ಹೇಳಿದ್ದೇನೆಂದರೆ, “ದೇವರು ಅರಣ್ಯದಲ್ಲಿ ಊಟಕ್ಕೆ ಬಡಿಸಬಲ್ಲನೋ?
20ಬಂಡೆಯನ್ನು ಹೊಡೆದು, ನೀರು ಚಿಮ್ಮಿ ಹೊರಗೆ ಬರುವಂತೆಯೂ, ಪ್ರವಾಹವು ದಡಮೀರಿ ಹರಿಯುವಂತೆಯೂ ಮಾಡಿದನಲ್ಲವೋ? ಆತನು ರೊಟ್ಟಿಯನ್ನು ಕೊಡಲು ಶಕ್ತನೋ? ತನ್ನ ಜನರಿಗೆ ಮಾಂಸವನ್ನೂ ಒದಗಿಸುವನೋ” ಎಂಬುದೇ.
21ಯೆಹೋವನು ಇದನ್ನು ಕೇಳಿ ರೋಷಗೊಂಡನು. ಅವರು ದೇವರಲ್ಲಿ ಭರವಸವಿಡದೆಯೂ, ಆತನ ರಕ್ಷಣೆಯನ್ನು ನಂಬದೆ ಹೋದುದರಿಂದಲೂ,
22ಆತನಿಗೆ ಇಸ್ರಾಯೇಲರ ಮೇಲೆ ಕೋಪವುಂಟಾಯಿತು; ಯಾಕೋಬ್ ವಂಶದವರಲ್ಲಿ ಬೆಂಕಿ ಹತ್ತಿತು.
23ಆತನು ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು,
24ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ, ಉಣ್ಣಲಿಕ್ಕೆ ಕೊಟ್ಟನು.
25ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು. ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು.
26ಆತನು ಗಗನಮಂಡಲದಲ್ಲಿ ಮೂಡಣ ಗಾಳಿಯನ್ನು ಉಂಟುಮಾಡಿ, ಪ್ರತಾಪದಿಂದ ತೆಂಕಣ ಗಾಳಿಯನ್ನೂ ಹೊಡೆದುಕೊಂಡು ಬಂದು,
27ಧೂಳಿನಷ್ಟು ಮಾಂಸವೃಷ್ಟಿಯನ್ನು ಸುರಿಸಿದನು; ಸಮುದ್ರದ ಮರಳಿನಷ್ಟು ಪಕ್ಷಿಗಳು ಅವರಿದ್ದಲ್ಲಿ ಬೀಳುವಂತೆ ಮಾಡಿದನು.
28ಅವು ಪಾಳೆಯದ ಮಧ್ಯದಲ್ಲಿಯೇ ಅವರ ಬಿಡಾರಗಳ ಸುತ್ತಲೂ ಬಿದ್ದವು.
29ಅವರು ತಿಂದು ಸಂತೃಪ್ತರಾದರು; ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.