30ಆಪಿನೊಳಗೆ ವಾಸಿಸುವ ನೀರಾನೆ, ಕರುಗಳ ಸಹಿತವಾದ ಹೋರಿಗಳ ಗುಂಪು, ಇವುಗಳಂತಿರುವ ಶತ್ರುಜನಾಂಗಗಳನ್ನು ಬೆದರಿಸು. ಅವು ಬೆಳ್ಳಿಗಟ್ಟಿಗಳನ್ನು ತಂದು ನಿನಗೆ ಅಡ್ಡಬೀಳಲಿ. ಯುದ್ಧಾಸಕ್ತ ಜನಾಂಗಗಳನ್ನು ಚದುರಿಸಿಬಿಡು.
31ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.
32ಭೂರಾಜ್ಯಗಳೇ, ದೇವರಿಗೆ ಗಾಯನಮಾಡಿರಿ; ಕರ್ತನನ್ನು ಸಂಕೀರ್ತಿಸಿರಿ. ಸೆಲಾ
33ಅನಾದಿಕಾಲದಿಂದಿರುವ ಮಹೋನ್ನತಾಕಾಶದಲ್ಲಿ ವಾಹನಾರೂಢನಾಗಿ ಇರುವಾತನನ್ನು ಸ್ತುತಿಸಿರಿ. ಕೇಳಿರಿ; ಆತನ ಗರ್ಜನೆಯು ಮಹಾಘೋರವಾದದ್ದು.
34ದೇವರ ಪ್ರತಾಪವನ್ನು ಕೊಂಡಾಡಿರಿ. ಆತನ ಗಾಂಭೀರ್ಯವು ಇಸ್ರಾಯೇಲರ ಆಶ್ರಯವಾಗಿದೆ; ಆತನ ಶಕ್ತಿಯು ಮೇಘಮಾರ್ಗದಲ್ಲೆಲ್ಲಾ ವ್ಯಾಪಿಸಿದೆ.