1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ದಾವೀದನ ಕೀರ್ತನೆ; ಹಾಡು. ದೇವರು ಎದ್ದು ಹೊರಡುವಾಗ, ಆತನ ವೈರಿಗಳು ಚದರಿಹೋಗಲಿ; ಆತನ ಹಗೆಗಾರರು ಆತನ ಎದುರಿನಿಂದ ಓಡಿಹೋಗಲಿ.
2ಹೊಗೆಯು ಗಾಳಿಯಿಂದ ಹೇಗೋ, ಹಾಗೆ ಅವರು ಆತನಿಂದ ಹಾರಿಹೋಗಲಿ; ಬೆಂಕಿಯ ಮುಂದೆ ಮೇಣವು ಕರಗಿ ಲಯವಾಗಿ ಹೋಗುವಂತೆ, ದೇವರ ಎದುರಿನಲ್ಲಿ ದುಷ್ಟರು ನಾಶವಾಗಿ ಹೋಗಲಿ.
3ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಉಲ್ಲಾಸಿಸಲಿ, ಆನಂದಧ್ವನಿಮಾಡಲಿ.
4ದೇವರಿಗೆ ಗಾಯನಮಾಡಿರಿ; ಆತನ ನಾಮವನ್ನು ಭಜಿಸಿರಿ; ಅರಣ್ಯದಲ್ಲಿ ಸವಾರಿಮಾಡುತ್ತಾ ಬರುವಾತನಿಗೆ ರಾಜಮಾರ್ಗವನ್ನು ಸಿದ್ಧಮಾಡಿರಿ. ಆತನ ನಾಮಧೇಯ ಯಾಹು; ಆತನ ಸನ್ನಿಧಿಯಲ್ಲಿ ಉಲ್ಲಾಸಿಸಿರಿ.
5ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ, ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.
6ಒಬ್ಬೊಂಟಿಗರನ್ನು ಸಂಸಾರಿಕರಾಗುವಂತೆ ಮಾಡುತ್ತಾನೆ; ಸೆರೆಯಲ್ಲಿರುವವರನ್ನು ಬಿಡಿಸಿ ಸುಖಾವಸ್ಥೆಗೆ ತರುತ್ತಾನೆ. ದ್ರೋಹಿಗಳಾದರೋ ಮರುಭೂಮಿಯಲ್ಲಿ ಉಳಿಯಬೇಕಾಗುವುದು.
7ದೇವರೇ, ನೀನು ನಿನ್ನ ಪ್ರಜೆಯ ಮುಂದೆ ಹೊರಟು, ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಾ ಬರುವಾಗ, ಸೆಲಾ
8ದೇವರು ಪ್ರತ್ಯಕ್ಷನಾಗಿದ್ದಾನೆಂದು ಭೂಮಿಯು ಕಂಪಿಸಿತು; ಮೇಘಮಂಡಲವು ಮಳೆಸುರಿಸಿತು. ಇಸ್ರಾಯೇಲರ ದೇವರು ಪ್ರತ್ಯಕ್ಷನಾಗಿದ್ದಾನೆಂದು, ಆ ಸೀನಾಯ್ ಬೆಟ್ಟವು ಕದಲಿತು.
9ದೇವರೇ, ನೀನು ಹೇರಳವಾಗಿ ಮಳೆಸುರಿಸಿ, ಬಾಯ್ದೆರೆದಿದ್ದ ನಿನ್ನ ಸ್ವತ್ತನ್ನು ಶಾಂತಪಡಿಸಿದಿ.
10ನಿನ್ನ ಪ್ರಜಾಮಂಡಲಿಯು ಅದರಲ್ಲಿ ವಾಸಮಾಡಿತು. ದೇವರೇ, ನೀನು ದಯಾಪರನಾಗಿ ದರಿದ್ರರಿಗೆ ಬೇಕಾದದ್ದೆಲ್ಲವನ್ನು ಒದಗಿಸಿಕೊಟ್ಟಿ.
11ಕರ್ತನು ಆಜ್ಞಾಪಿಸಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.
12ಓಡಿ ಹೋಗುತ್ತಾರೆ; ಸೈನ್ಯದೊಡನೆ ಅರಸುಗಳು ಓಡಿ ಹೋಗುತ್ತಾರೆ; ಮನೆಯಲ್ಲಿದ್ದ ಸ್ತ್ರೀಯರು ಕೊಳ್ಳೆಯನ್ನು ಹಂಚುತ್ತಾರೆ.
13ನೀವು ಕುರಿಹಟ್ಟಿಗಳಲ್ಲಿ ಮಲಗಿಕೊಂಡಿರುವುದೇನು? ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಥಳಥಳಿಸುತ್ತವೆ.
14ಸರ್ವಶಕ್ತನು ಅಲ್ಲಿ ರಾಜರನ್ನು ಚದುರಿಸಿದಾಗ, ಸಲ್ಮೋನಿನ ಮೇಲೆ ಹಿಮವು ಬಿದ್ದಿತು.
15ಬಾಷಾನಿನ ಪರ್ವತವು ಮಹೋನ್ನತವಾಗಿದೆ; ಆ ಬಾಷಾನ್ ಗಿರಿಯು ಶಿಖರಗಳುಳ್ಳದ್ದೇ.
16ಎಲೈ, ಶಿಖರೋನ್ನತಪರ್ವತಗಳೇ, ದೇವರು ತನ್ನ ನಿವಾಸಕ್ಕಾಗಿ ಆರಿಸಿಕೊಂಡಿರುವ ಈ ಪರ್ವತವನ್ನು ನೀವು ಓರೆಗಣ್ಣಿನಿಂದ ನೋಡುವುದೇಕೆ? ಯೆಹೋವನು ಸದಾಕಾಲವೂ ಇದರಲ್ಲೇ ವಾಸಿಸುವನು.
17ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತನಾದ ಯೆಹೋವನು ಅವುಗಳ ಸಮೇತವಾಗಿ, ಸೀನಾಯ್ ಬೆಟ್ಟದಿಂದ ಪವಿತ್ರಾಲಯಕ್ಕೆ ಬಂದಿದ್ದಾನೆ.