3ಇಗೋ, ಅವರು ನನ್ನ ಜೀವಕ್ಕೆ ಹೊಂಚುಹಾಕುತ್ತಾರೆ; ಬಲಿಷ್ಠರು ನನಗೆ ವಿರುದ್ಧವಾಗಿ ಗುಂಪುಕೂಡಿದ್ದಾರೆ. ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ!
4ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಮುತ್ತಿಗೆ ಹಾಕಿ ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.
5ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ, ನೀನು ಎಚ್ಚರವಾಗಿ ಎಲ್ಲಾ ಅನ್ಯಜನಾಂಗಗಳನ್ನು ದಂಡಿಸು. ದುಷ್ಟದ್ರೋಹಿಗಳಲ್ಲಿ ಒಬ್ಬನಿಗೂ ದಯತೋರಿಸಬೇಡ. ಸೆಲಾ
6ಅವರು ಪ್ರತಿಸಾಯಂಕಾಲವೂ ಬಂದು ಬಂದು ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಿದ್ದಾರೆ.
7ಇಗೋ, ಅವರ ಬಾಯಿಗಳು ಎಷ್ಟೋ ಮಾತುಗಳನ್ನು ಕಕ್ಕುತ್ತವೆ; ಅವೆಲ್ಲಾ ಹರಿತವಾದ ಕತ್ತಿಗಳಂತಿವೆ, ಅವರು, “ನಮ್ಮನ್ನು ಕೇಳುವವರು ಯಾರು?” ಅಂದುಕೊಳ್ಳುತ್ತಾರೆ.
8ಯೆಹೋವನೇ, ನೀನಾದರೋ ಅವರನ್ನು ನೋಡಿ ನಗುವಿ; ಎಲ್ಲಾ ಅನ್ಯಜನಾಂಗಗಳನ್ನು ಪರಿಹಾಸ್ಯಮಾಡುವಿ.
9ನನ್ನ ಬಲವೇ, ನಿನ್ನನ್ನು ನಿರೀಕ್ಷಿಸುತ್ತಿದ್ದೇನೆ. ನನ್ನ ಆಶ್ರಯದುರ್ಗವು ದೇವರೇ.