3ನನ್ನ ಹೃದಯವು ಆತಂಕದಿಂದ ಕೂಡಿತ್ತು; ನಾನು ಹೆಚ್ಚಾಗಿ ಯೋಚಿಸುತ್ತಿರುವಲ್ಲಿ ತಾಪ ಹೆಚ್ಚಿತು. ಆಗ ನಾನು ಬಾಯಿ ಬಿಟ್ಟು,
4“ಯೆಹೋವನೇ, ನನಗೆ ಅವಸಾನವುಂಟೆಂದೂ, ನನ್ನ ಜೀವಮಾನವು ಅತ್ಯಲ್ಪವೆಂದೂ, ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು.
5ನನ್ನ ಆಯುಷನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ” ಅಂದೆನು. ಮನುಷ್ಯನೆಂಬವನು ಎಷ್ಟು ಸ್ಥಿರನೆಂದು ಕಂಡರೂ ಬರಿ ಉಸಿರೇ. ಸೆಲಾ
6ನರರು ಮಾಯಾರೂಪವಾದ ನೆರಳಿನಂತೆ ಸಂಚರಿಸುವವರು; ಅವರು ಸುಮ್ಮಸುಮ್ಮನೆ ಗಡಿಬಿಡಿಮಾಡುವವರು; ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತಾರೆ, ಆದರೆ ಅದು ಯಾರ ಪಾಲಾಗುವುದೋ ತಾವೇ ತಿಳಿಯರು.
7“ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವುದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ.
8ಎಲ್ಲಾ ದ್ರೋಹಗಳಿಂದ ನನ್ನನ್ನು ಬಿಡುಗಡೆಮಾಡು; ಮೂರ್ಖರ ನಿಂದೆಗೆ ಗುರಿಮಾಡಬೇಡ.
9ನೀನೇ ಇದನ್ನು ಬರಮಾಡಿದ್ದರಿಂದ ನಾನು ಏನೂ ಹೇಳದೆ ಮೌನವಾಗಿರುವೆನು.