1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ. ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದರಿಂದ ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ.
2ಅದು ಅವನನ್ನು ವಂಚಿಸಿ, “ನಿನ್ನ ದ್ರೋಹವು ಬೈಲಿಗೆ ಬರುವುದಿಲ್ಲ ಮತ್ತು ನಿನಗೆ ಕೇಡು ತರುವುದಿಲ್ಲ” ಎಂದು ಊದಿಬಿಡುತ್ತದೆ.
3ಅವನ ಬಾಯಿಂದ ಕೆಡುಕೂ, ವಂಚನೆಯೂ ಬರುತ್ತವೆ; ವಿವೇಕಮಾರ್ಗವನ್ನೂ, ಪರಹಿತವನ್ನೂ ಬಿಟ್ಟೇಬಿಟ್ಟಿದ್ದಾನೆ.
4ಹಾಸಿಗೆಯ ಮೇಲೆ ಇರುವಾಗಲೂ ಕೆಡುಕನ್ನೇ ಯೋಚಿಸುತ್ತಿರುವನು; ದುಷ್ಟ ಮಾರ್ಗದಲ್ಲಿ ನಿಂತುಕೊಂಡಿದ್ದಾನೆ; ಎಂಥ ದುಷ್ಕೃತ್ಯಕ್ಕೂ ಹೇಸುವುದಿಲ್ಲ.
5ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ; ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ.
6ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ, ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ; ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ.