1ದಾವೀದನು ಅಬೀಮೆಲೆಕನ ಎದುರಿನಲ್ಲಿ ಹುಚ್ಚನಂತೆ ತೋರ್ಪಡಿಸಿಕೊಂಡು ಅವನ ಬಳಿಯಿಂದ ಹೊರಟಾಗ ರಚಿಸಿದ ಕೀರ್ತನೆ. ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.
2ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು; ಇದನ್ನು ದೀನರು ಕೇಳಿ ಸಂತೋಷಿಸುವರು.
3ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.
4ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು, ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.
5ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಅವಮಾನಕ್ಕೆ ಈಡಾಗುವುದೇ ಇಲ್ಲ.
6ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು, ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.
7ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು, ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ.
8ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.
9ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವುದಿಲ್ಲ.
10ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಒಳಿತಿಗೆ ಕೊರತೆಯಿಲ್ಲ.