4ಯೆಹೋವನ ವಚನವು ಯಥಾರ್ಥವಾದದ್ದು; ಆತನ ಕೃತ್ಯವೆಲ್ಲಾ ನಂಬಿಕೆಯುಳ್ಳದ್ದಾಗಿವೆ.
5ಆತನು ನೀತಿ ಮತ್ತು ನ್ಯಾಯಗಳನ್ನು ಪ್ರೀತಿಸುವವನು; ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ.
6ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.
7ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ಮಾಡಿದವನು ಆತನೇ; ಭೂಮಿಯ ಕೆಳಗೆ ಜಲಾಶಯಗಳನ್ನು ಇಟ್ಟವನು ಆತನೇ.
8ಭೂಲೋಕದವರೆಲ್ಲರೂ ಯೆಹೋವನಿಗೆ ಭಯಪಡಲಿ; ಭೂನಿವಾಸಿಗಳೆಲ್ಲರೂ ಆತನಿಗೆ ಹೆದರಲಿ.
9ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು; ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು.
10ಯೆಹೋವನು ಅನ್ಯಜನರ ಸಂಕಲ್ಪಗಳನ್ನು ವ್ಯರ್ಥಮಾಡುತ್ತಾನೆ; ಅವರ ಯೋಚನೆಗಳನ್ನು ನಿಷ್ಫಲಮಾಡುತ್ತಾನೆ.
11ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವುದು; ಆತನ ಸಂಕಲ್ಪವು ಎಂದಿಗೂ ಕದಲುವುದಿಲ್ಲ.
12ಯಾರಿಗೆ ಯೆಹೋವನೇ ದೇವರಾಗಿದ್ದಾನೋ, ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು.
13ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ;
14ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ.
15ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ, ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ.
16ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ; ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ.
17ಜೀವದ ರಕ್ಷಣೆಗಾಗಿ ಕುದುರೆಯು ಪ್ರಯೋಜನವಿಲ್ಲ; ಅದು ತನ್ನ ವಿಶೇಷಬಲದಿಂದ ಯಾರನ್ನೂ ರಕ್ಷಿಸಲಾರದು.
18ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ; ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ.