4ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವುದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು.
5ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು.
6ಹೀಗಿರುವುದರಿಂದ ನನ್ನ ಸುತ್ತಲಿರುವ ವೈರಿಗಳ ಮೇಲೆ, ನನ್ನ ತಲೆ ಎತ್ತಲ್ಪಟ್ಟಿರುವುದು; ನಾನು ಯೆಹೋವನ ಗುಡಾರದಲ್ಲಿ, ಉತ್ಸಾಹಧ್ವನಿಯೊಡನೆ ಯಜ್ಞಗಳನ್ನು ಸಮರ್ಪಿಸುವೆನು. ಆತನನ್ನು ಹಾಡುತ್ತಾ ವಾದ್ಯಬಾರಿಸುವೆನು.
7ಯೆಹೋವನೇ, ನಿನಗೆ ಗಟ್ಟಿಯಾಗಿ ಮೊರೆಯಿಡುತ್ತೇನೆ; ನನ್ನನ್ನು ಕರುಣಿಸಿ, ಸದುತ್ತರವನ್ನು ದಯಪಾಲಿಸು.
8“ನನ್ನ ಸಾನ್ನಿಧ್ಯಕ್ಕೆ ಬಾ” ಎಂಬ ನಿನ್ನ ಮಾತಿಗೆ, ನಾನು, “ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು” ಎಂದು ಉತ್ತರಕೊಟ್ಟೆನು.
9ನನಗೆ ವಿಮುಖನಾಗಿರಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ. ನೀನು ನನಗೆ ಸಹಾಯಕನಾಗಿಯೇ ಇದ್ದೆಯಲ್ಲವೇ; ನನ್ನನ್ನು ರಕ್ಷಿಸಿದ ದೇವರೇ, ಕೈಬಿಡಬೇಡ, ತೊರೆದುಬಿಡಬೇಡ.
10ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ಹೊಂಚುಹಾಕಿರುವವರಿಗೆ ಸಿಕ್ಕದ ಹಾಗೆ ನನ್ನನ್ನು ಸಮವಾದ ದಾರಿಯಲ್ಲಿ ನಡೆಸು.
12ಸುಳ್ಳುಸಾಕ್ಷಿಗಳೂ ಬೆದರಿಸುವವರೂ ನನಗೆ ವಿರುದ್ಧವಾಗಿ ಎದ್ದಿದ್ದಾರೆ; ಇಂಥ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡ.