Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 22

1 ಅರಸು 22:18-35

Help us?
Click on verse(s) to share them!
18ಆಗ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ಇವನು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೋ?” ಎಂದನು.
19ಅದಕ್ಕೆ ಮೀಕಾಯೆಹುವು “ಅದಿರಲಿ, ಈಗ ಯೆಹೋವನ ವಾಕ್ಯವನ್ನು ಕೇಳು, ಯೆಹೋವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಳಲ್ಲಿ ನಿಂತಿದ್ದನ್ನೂ ಕಂಡೆನು.
20ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸುವಿರಿ’ ಎಂದು ಕೇಳಿದಾಗ ಒಬ್ಬನು ಒಂದು ರೀತಿಯಾಗಿ, ಇನ್ನೊಬ್ಬನು ಇನ್ನೊಂದು ರೀತಿಯಾಗಿ ಉತ್ತರಕೊಟ್ಟರು.
21ಕೊನೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಅವನಿಗೆ, ‘ನಾನು ಹೋಗಿ ಅವರನ್ನು ಪ್ರೇರೇಪಿಸುವೆನು’ ಅಂದಿತು.
22‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ, ‘ಹೋಗಿ ಅದರಂತೆ ಮಾಡು ಅವನನ್ನು ಪ್ರೇರೇಪಿಸಿ ಸಫಲವಾಗುವಿ’ ಅಂದನು.
23ನೋಡು ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು ನಿನ್ನ ಎಲ್ಲಾ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು.
24ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತನಾಡುವುದಕ್ಕೋಸ್ಕರ ಯಾವ ಮಾರ್ಗವಾಗಿ ಬಂದಿತು?” ಎನ್ನಲು
25ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು” ಎಂದು ಉತ್ತರಕೊಟ್ಟನು.
26ಆಗ ಇಸ್ರಾಯೇಲಿನ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪುರಾಧಿಕಾರಿಯಾದ ಆಮೋನನಿಗೂ, ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿ ಅವರಿಗೆ,
27‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಅನ್ನುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಆಜ್ಞಾಪಿಸಿದನು.
28ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ” ಎಂದು ಹೇಳಿ “ಎಲ್ಲಾ ಜನರೇ, ಇದನ್ನು ಕೇಳಿರಿ” ಎಂದು ಕೂಗಿದನು.
29ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು.
30ಇಸ್ರಾಯೇಲರ ಅರಸನೂ ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುವೆನು. ನೀನಾದರೂ ನಿನ್ನ ರಾಜವಸ್ತ್ರಗಳನ್ನೇ ಧರಿಸಿಕೊಂಡು ಬಾ” ಎಂದು ಹೇಳಿ ವೇಷಹಾಕಿಕೊಂಡು ರಣರಂಗಕ್ಕೆ ಹೋದನು.
31ಅರಾಮ್ಯರ ಅರಸನು ತನ್ನ ರಥಬಲದ ಮೂವತ್ತೆರಡು ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನು ಬಿಟ್ಟು ಇಸ್ರಾಯೇಲರ ಅರಸನಿಗೇ ಗುರಿಯಿಡಿರಿ” ಎಂದು ಆಜ್ಞಾಪಿಸಿದನು.
32ಅವರು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಾಯೇಲರ ಅರಸನೆಂದು ತಿಳಿದು ಅವನ ವಿರುದ್ಧ ಯುದ್ಧಮಾಡಿದರು.
33ಆಗ ಅವನು ಇಸ್ರಾಯೇಲ್ಯರ ಅರಸನಲ್ಲವೆಂಬುದು ರಥಬಲದ ಅಧಿಪತಿಗಳಿಗೆ ಗೊತ್ತಾದಾಗ ಅವರು ಅವನನ್ನು ಬಿಟ್ಟು ಹಿಂದಿರುಗಿದರು.
34ಅರಾಮ್ಯರ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಬಾಣವನ್ನೆಸೆಯಲು ಆ ಬಾಣವು ಇಸ್ರಾಯೇಲ್ಯರ ಅರಸನಿಗೆ ಅವನ ಕವಚದ ಸಂದಿಯಲ್ಲಿ ತಾಗಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ಹಿಂತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ಕರೆದುಕೊಂಡು ಹೋಗು, ನನಗೆ ದೊಡ್ಡ ಗಾಯವಾಗಿದೆ” ಎಂದು ಹೇಳಿದನು.
35ಆದರೂ ಆ ದಿನ ಯುದ್ಧವು ಬಹು ಘೋರವಾಗಿದ್ದುದರಿಂದ ಅರಸನು ಅರಾಮ್ಯರ ಎದುರಾಗಿ ತನ್ನ ರಥದಲ್ಲಿಯೇ ಆತುಕೊಂಡು ನಿಂತಿದ್ದು ಸಾಯಂಕಾಲವಾದಾಗ ಸತ್ತನು. ಗಾಯದಿಂದ ರಕ್ತವು ಸುರಿದು ಸುರಿದು ರಥದ ಅಡಿಯಲ್ಲಿ ನಿಂತಿತು.

Read 1 ಅರಸು 221 ಅರಸು 22
Compare 1 ಅರಸು 22:18-351 ಅರಸು 22:18-35