Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 15

1 ಅರಸು 15:9-25

Help us?
Click on verse(s) to share them!
9ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ಅರಸನಾದನು.
10ಅವನು ಯೆರೂಸಲೇಮನ್ನು ನಲ್ವತ್ತೊಂದು ವರ್ಷ ಆಳ್ವಿಕೆ ಮಾಡಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆಯು ಅವನ ತಾಯಿ.
11ಅವನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.
12ಅವನು ವಿಟರನ್ನು ದೇಶದಿಂದ ಹೊರಡಿಸಿ, ತನ್ನ ಹಿರಿಯರು ಮಾಡಿಸಿಟ್ಟ ವಿಗ್ರಹಗಳನ್ನೆಲ್ಲಾ ತೆಗೆದುಹಾಕಿದನು.
13ಅವನ ತಾಯಿಯಾದ ಮಾಕಳೂ ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ ಆಸನು ಆಕೆಯನ್ನು ಗದ್ದುಗೆಯಿಂದ ತಳ್ಳಿ, ಆ ಮೂರ್ತಿಯನ್ನು ಕಡಿದು, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟು ಹಾಕಿದನು.
14ಅವನು ದೇಶದಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದಿದ್ದರೂ ತನ್ನ ಜೀವಮಾನದಲ್ಲೆಲ್ಲಾ ಪ್ರಾಮಾಣಿಕವಾದ ಮನಸ್ಸಿನಿಂದ ಸತ್ಯಮಾರ್ಗದಲ್ಲಿ ಯೆಹೋವನಿಗೆ ನಡೆದುಕೊಂಡನು.
15ಇದಲ್ಲದೆ ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನು ಪಾತ್ರೆಗಳನ್ನೂ ಯೆಹೋವನ ಆಲಯದಲ್ಲಿ ತಂದಿಟ್ಟನು.
16ಅವನಿಗೂ ಇಸ್ರಾಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು
17ಇಸ್ರಾಯೇಲರ ಅರಸನಾದ ಬಾಷನು ಯೆಹೂದ್ಯರಿಗೆ ವಿರುದ್ಧವಾಗಿ ಯುದ್ಧಮಾಡಿ ಯಾರೂ ಯೆಹೂದ್ಯರ ಅರಸನಾದ ಆಸನ ಬಳಿಗೆ ಹೋಗಿ ಬರುವುದಕ್ಕಾಗದಂತೆ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.
18ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಉಳಿದಿದ್ದ ಬೆಳ್ಳಿ ಮತ್ತು ಬಂಗಾರವನ್ನು ತೆಗೆದುಕೊಂಡು, ಅದನ್ನು ದೂತರ ಮುಖಾಂತರವಾಗಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನೂ, ಹೆಜ್ಯೋನನ ಮೊಮ್ಮಗನೂ, ಟಬ್ರಿಮ್ಮೋನನ ಮಗನೂ ಆದ ಬೆನ್ಹದದನಿಗೆ ಕೊಟ್ಟು ಕಳುಹಿಸಿದನು.
19ಆತನು ಅವನಿಗೆ “ನನಗೂ ನಿನಗೂ, ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆಯಾದಂತೆ, ಇಗೋ ನಿನಗೆ ಬೆಳ್ಳಿ ಮತ್ತು ಬಂಗಾರವನ್ನು ಕಾಣಿಕೆಯಾಗಿ ಕಳುಹಿಸಿದ್ದೇನೆ. ಇಸ್ರಾಯೇಲರ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವಂತೆ ಅವನ ಸಂಗಡ ನೀನು ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಬಿಡು” ಎಂದು ಹೇಳಿದನು.
20ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ತನ್ನ ಸೈನ್ಯಾಧಿಪತಿಗಳನ್ನು ಯುದ್ಧಕ್ಕಾಗಿ ಇಸ್ರಾಯೇಲರ ಪಟ್ಟಣಗಳಿಗೆ ಕಳುಹಿಸಿದನು. ಇವರು ಇಯ್ಯೋನ್, ದಾನ್, ಆಬೇಲ್ಬೇತ್ಮಾಕಾ, ಕಿನ್ನೆರೋತ್ ಪ್ರದೇಶ, ನಫ್ತಾಲ್ಯರ ಎಲ್ಲಾ ಪ್ರಾಂತ್ಯ ಇವುಗಳನ್ನು ಹಾಳುಮಾಡಿದರು.
21ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆಯನ್ನು ಕಟ್ಟಿಸುವುದನ್ನು ಬಿಟ್ಟು ತಿರ್ಚಕ್ಕೆ ಹೋಗಿ ಅಲ್ಲಿಯೇ ವಾಸಮಾಡಲು ತೊಡಗಿದನು.
22ಅನಂತರ ಅರಸನಾದ ಆಸನು ಯೆಹೂದ್ಯರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲು, ಮರಗಳನ್ನು ಅವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಬೆನ್ಯಾಮೀನ್ಯರ ಗೆಬ, ಮಿಚ್ಪೆ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.
23ಆಸನ ಉಳಿದ ಚರಿತ್ರೆ, ಅವನ ಎಲ್ಲಾ ಪರಾಕ್ರಮಕೃತ್ಯಗಳು, ಅವನು ಪಟ್ಟಣಗಳನ್ನು ಕಟ್ಟಿಸಿದ ಸಂಗತಿಗಳೂ, ಅವನ ಇತರ ಕಾರ್ಯಗಳು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗವುಂಟಾಯಿತು.
24ಅವನು ತನ್ನ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು.
25ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲರ ಅರಸನಾಗಿ ಎರಡು ವರ್ಷ ಆಳ್ವಿಕೆ ಮಾಡಿದನು.

Read 1 ಅರಸು 151 ಅರಸು 15
Compare 1 ಅರಸು 15:9-251 ಅರಸು 15:9-25