15ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ತಮ್ಮ ಒಳ್ಳೆಯ ಹೃದಯದಲ್ಲಿ ಅದನ್ನು ಸಂಗ್ರಹಿಸಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ. ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು.
16“ಇದಲ್ಲದೆ ಯಾರೂ ದೀಪವನ್ನು ಹಚ್ಚಿ ಪಾತ್ರೆಯಿಂದ ಮುಚ್ಚುವುದಿಲ್ಲ, ಮಂಚದ ಕೆಳಗೂ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
17ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ ಮತ್ತು ಪ್ರಕಟವಾಗದೆ ಇರುವಂಥ ಒಂದು ಗುಟ್ಟೂ ಇರುವುದಿಲ್ಲ, ಅದು ಬಟ್ಟಬಯಲಾಗುವುದು.
18ಆದುದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ, ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವುದು” ಅಂದನು.
19ಯೇಸುವಿನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು.
20ಜನರು ಆತನಿಗೆ, “ನಿನ್ನ ತಾಯಿಯು, ನಿನ್ನ ಸಹೋದರರು ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ” ಎಂದು ಹೇಳಿದಾಗ,
21ಆತನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿಯು ಸಹೋದರರು ಆಗಿದ್ದಾರೆ” ಎಂದು ಉತ್ತರಕೊಟ್ಟನು.
22ಒಂದು ದಿನ ಯೇಸು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ, “ಸಮುದ್ರದ ಆಚೇ ದಡಕ್ಕೆ ಹೋಗೋಣ” ಎಂದು ಹೇಳಲು, ಅವರು ದೋಣಿಯನ್ನು ಸಾಗಿಸಿ ಹೊರಟರು.
23ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು, ಅಷ್ಟರಲ್ಲಿ ಬಿರುಗಾಳಿ ಸಮುದ್ರದಲ್ಲಿ ಬೀಸಿ ದೋಣಿಯೊಳಗೆ ನೀರು ತುಂಬಿಕೊಂಡದ್ದರಿಂದ ಅವರೆಲ್ಲರು ಅಪಾಯಕ್ಕೆ ಗುರಿಯಾದರು.
24ಹೀಗಿರಲಾಗಿ ಅವರು ಆತನ ಹತ್ತಿರ ಬಂದು, “ಗುರುವೇ, ಗುರುವೇ, ನಾವು ಸಾಯುತ್ತಿದ್ದೇವೆ” ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರಿನ ಅಲೆಗಳನ್ನೂ ಗದರಿಸಿದನು. ಆಗ ಅವು ನಿಂತು, ಶಾಂತವಾಯಿತು.
25ತರುವಾಯ ಆತನು, “ನಿಮ್ಮ ನಂಬಿಕೆ ಎಲ್ಲಿ?” ಎಂದು ಅವರನ್ನು ಕೇಳಿದನು. ಅವರು ಭಯಪಟ್ಟು, “ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ. ಅವು ಕೂಡ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ?” ಎಂದು ಆಶ್ಚರ್ಯಪಟ್ಟು ಒಬ್ಬರಿಗೊಬ್ಬರು ಮಾತನಾಡಿಕೊಂಡು.
26ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಯನ್ನು ತಲುಪಿದರು.