Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ರೋಮಾ - ರೋಮಾ 7

ರೋಮಾ 7:1-11

Help us?
Click on verse(s) to share them!
1ಸಹೋದರರೇ, ಧರ್ಮಶಾಸ್ತ್ರವನ್ನು ತಿಳಿದವರೊಂದಿಗೆ ನಾನು ಮಾತನಾಡುತ್ತಿದ್ದೇನೆ, ಒಬ್ಬ ಮನುಷ್ಯನು ಜೀವದಿಂದಿರುವವರೆಗೆ ಮಾತ್ರ ಅವನ ಮೇಲೆ ಧರ್ಮಶಾಸ್ತ್ರವು ನಿಯಂತ್ರಣ ಸಾಧಿಸುತ್ತದೆಂಬುದು ನಿಮಗೆ ಗೊತ್ತಿಲ್ಲವೇ?
2ಇದಕ್ಕೆ ದೃಷ್ಟಾಂತ, ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು. ಗಂಡನು ಸತ್ತರೆ ಮದುವೆಯ ನಿಯಮದಿಂದ ಅವಳು ಬಿಡುಗಡೆಯಾಗುತ್ತಾಳೆ.
3ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಆಕೆ ಆ ನಿಯಮದಿಂದ ಬಿಡುಗಡೆಯಾದ್ದರಿಂದ, ಆಕೆ ಮತ್ತೊಬ್ಬ ಗಂಡನನ್ನು ಮದುವೆ ಮಾಡಿಕೊಂಡರೂ ವ್ಯಭಿಚಾರಿಣಿ ಎಂದೆನಿಸಿಕೊಳ್ಳುವುದಿಲ್ಲ.
4ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತಿದ್ದೀರಿ. ದೇವರಿಗೆ ಫಲಕೊಡುವುದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತು ಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿದ್ದೀರಿ.
5ನಾವು ಶರೀರಾಧೀನ ಸ್ವಭಾವವನ್ನು ಅನುಸರಿಸುತ್ತಿದ್ದಾಗ ಧರ್ಮಶಾಸ್ತ್ರದಿಂದಲೇ ಪ್ರೇರಿತವಾದ ಪಾಪಾದಾಶೆಗಳು ನಮ್ಮ ಅಂಗಗಳಲ್ಲಿ ಸಕ್ರಿಯವಾಗಿ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು.
6ಈಗಲಾದರೋ ನಮ್ಮನ್ನು ಬಂಧಿಸಿಟ್ಟಿದ್ದ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತವರಾದ ಕಾರಣ ಆ ಧರ್ಮಶಾಸ್ತ್ರದಿಂದ ಬಿಡುಗಡೆಹೊಂದಿದ್ದೇವೆ. ಹೀಗಿರಲಾಗಿ ಬರಹರೂಪದ ಹಿಂದಿನ ಶಾಸ್ತ್ರದ ರೀತಿಯಲ್ಲಿ ನಾವು ದೇವರಿಗೆ ಸೇವೆ ಸಲ್ಲಿಸದೆ, ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ಆತನ ಸೇವೆ ಮಾಡುವವರಾಗಿದ್ದೇವೆ.
7ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರವು ಪಾಪಸ್ವರೂಪವೋ? ಎಂದಿಗೂ ಅಲ್ಲ. ಧರ್ಮಶಾಸ್ತ್ರವಿಲ್ಲದಿದ್ದರೆ ಪಾಪವೆಂದರೆ ಏನೆಂದು ನನಗೆ ಗೊತ್ತಾಗುತ್ತಿರಲಿಲ್ಲ. ದೃಷ್ಟಾಂತವಾಗಿ “ದುರಾಶೆ ಪಾಪವೆಂದು” ಎಂದು ಧರ್ಮಶಾಸ್ತ್ರವು ಹೇಳದಿದ್ದರೆ ದುರಾಶೆಯಂದರೆ ಏನೆಂದು ನನಗೆ ತಿಳಿಯುತ್ತಿರಲಿಲ್ಲ.
8ಆದರೆ ಪಾಪವು ಈ ಆಜ್ಞೆಯನ್ನು ಉಪಯೋಗಿಸಿಕೊಂಡು ಸಕಲ ವಿಧವಾದ ದುರಾಶೆಗಳನ್ನು ನನ್ನಲ್ಲಿ ಹುಟ್ಟಿಸಿತು. ಧರ್ಮಶಾಸ್ತ್ರವು ಇಲ್ಲದಿರುವಾಗ ಪಾಪವು ಸತ್ತಂತೆ.
9ಮೊದಲು ನಾನು ಧರ್ಮಶಾಸ್ತ್ರವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪಕ್ಕೆ ಜೀವ ಬಂದಿತು. ನಾನು ಸತ್ತೆನು.
10ಜೀವಿಸುವುದಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣಕ್ಕೆ ಕಾರಣವಾಯಿತೆಂದು ನನಗೆ ಕಂಡು ಬಂದಿತು.
11ಹೇಗೆಂದರೆ, ಆಜ್ಞೆಯ ಮೂಲಕವೇ ಪಾಪವು ಸಮಯ ಸಾಧಿಸಿ ನನ್ನನ್ನು ವಂಚಿಸಿತು; ಆ ಕಟ್ಟಳೆಯ ಮೂಲಕವೇ ನನ್ನನ್ನು ಕೊಂದು ಹಾಕಿತು.

Read ರೋಮಾ 7ರೋಮಾ 7
Compare ರೋಮಾ 7:1-11ರೋಮಾ 7:1-11