Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಶಾ

ಯೆಶಾ 25

Help us?
Click on verse(s) to share them!
1ಯೆಹೋವನೇ, ನೀನೇ ನನ್ನ ದೇವರು; ನೀನು ಸತ್ಯ ಪ್ರಾಮಾಣಿಕತೆಗಳನ್ನು ಅನುಸರಿಸಿ, ಆದಿ ಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಗಳನ್ನು ನಡೆಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿಸುವೆನು.
2ಏಕೆಂದರೆ ನೀನು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ, ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಲಾರದ ಹಾಳು ಊರನ್ನಾಗಿಯೂ ಮಾಡಿದ್ದಿ.
3ಆದಕಾರಣ ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವುದು, ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವುದು.
4ನೀನು ದೀನರಿಗೆ ಕೋಟೆಯು, ಇಕ್ಕಟ್ಟಿನಲ್ಲಿ ದಿಕಿಲ್ಲದವರಿಗೆ ರಕ್ಷಣಾದುರ್ಗವೂ, ಬಿಸಿಲಿಗೆ ನೆರಳೂ, ಭೀಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.
5ಮೋಡಗಳು ಒಣನೆಲದ ಕಾವನ್ನು ತಂಪಾಗಿಸುವಂತೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೆ ಕಡಿಮೆಯಾಗುವುದೋ ಹಾಗೆ ನಿನ್ನಿಂದ ಭೀಕರರ ಉತ್ಸಾಹ ಗಾನವು ಕ್ರಮೇಣ ನಿಂತುಹೋಗುವುದು.
6ಇದಲ್ಲದೆ, ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲ ಜನಾಂಗಗಳಿಗೆ ಸಾರವತ್ತಾದ ಕೊಬ್ಬಿದ ಮೃಷ್ಟಾನ್ನದಿಂದಲೂ, ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಸಿದ್ಧಮಾಡುವನು.
7ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ, ಸಕಲ ದೇಶದವರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವನು.
8ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರೆಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.
9ಆ ದಿನದಲ್ಲಿ ಜನರು, “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು” ಎಂದು ಹೇಳಿಕೊಳ್ಳುವರು.
10ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವುದು; ಮೋವಾಬ್ಯರೋ ತಿಪ್ಪೆಗುಂಡಿಯ ಕೆಸರಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾವಿದ್ದಲ್ಲೇ ತುಳಿಯಲ್ಪಡುವರು.
11ಈಜುವವನು ಕೈಯಾಡಿಸುವಂತೆ ಅವರು ಅದರಲ್ಲಿಯೇ ಕೈಯಾಡಿಸುವರು; ಆದರೆ ಯೆಹೋವನು ಅವರ ಗರ್ವವನ್ನೂ, ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.
12ದುರ್ಗಮವಾಗಿಯೂ, ಎತ್ತರವಾಗಿಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲ ಸಮಮಾಡಿ ಧೂಳಿಗೆ ತರುವನು.