Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 16

ಯಾಜ 16:3-13

Help us?
Click on verse(s) to share them!
3ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
4ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
5ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
6ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
7ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
8ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
9ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
10ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
11“ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
12ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
13ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.

Read ಯಾಜ 16ಯಾಜ 16
Compare ಯಾಜ 16:3-13ಯಾಜ 16:3-13