Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 13

ಯಾಜ 13:2-19

Help us?
Click on verse(s) to share them!
2“ಒಬ್ಬ ಮನುಷ್ಯನ ಮೈಮೇಲೆ ಬಾವಾಗಲಿ, ಗುಳ್ಳೆಯಾಗಲಿ ಅಥವಾ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕನಾದ ಆರೋನನ ಬಳಿಗೆ ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
3ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸುವಾಗ ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿದ್ದರೆ ಮತ್ತು ಆ ಮಚ್ಚೆ ಉಳಿದ ಚರ್ಮಕ್ಕಿಂತ ಆಳವಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
4ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ಉಳಿದ ಚರ್ಮಕ್ಕಿಂತ ಆಳವಾಗಿರದೆ ಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗದಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಬೇಕು.
5ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ಕಾಣಿಸಿದರೆ ಯಾಜಕನು ಇನ್ನು ಏಳು ದಿನಗಳ ವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು.
6ಆ ಏಳು ದಿನಗಳಾದ ಮೇಲೆ ಯಾಜಕನು ಪುನಃ ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊಬ್ಬಾಗಿದ್ದರೆ ಯಾಜಕನು ಅದು ಬರೀ ಗುಳ್ಳೆಯೆಂದು ತಿಳಿದು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.
7ಆದರೆ ಅವನು ತನ್ನ ಶುದ್ಧಿಯ ವಿಷಯದಲ್ಲಿ ತನ್ನನ್ನು ಯಾಜಕನಿಗೆ ತೋರಿಸಿಕೊಂಡನಂತರ ಆ ಗುಳ್ಳೆ ದೇಹದ ಚರ್ಮದಲ್ಲಿ ಹರಡಿಕೊಂಡರೆ ಅವನು ಪುನಃ ಯಾಜಕನಿಗೆ ತೋರಿಸಿಕೊಳ್ಳಬೇಕು.
8ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
9“ಕುಷ್ಠರೋಗದ ಲಕ್ಷಣಗಳು ಯಾವನಲ್ಲಾದರೂ ಕಾಣಿಸಿದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
10ಯಾಜಕನು ಅವನನ್ನು ಪರೀಕ್ಷಿಸುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಅಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಆ ಬಾವಿನಲ್ಲಿ ಮಾಂಸ ಕಾಣಿಸಿದರೆ ಅದು ಹಳೇ ಕುಷ್ಠರೋಗದ ಗುರುತು.
11ಅವನು ಅಶುದ್ಧನಾದುದರಿಂದ ಯಾಜಕನು ಅವನನ್ನು ಪ್ರತ್ಯೇಕಿಸದೆ ಅಶುದ್ಧನೆಂದು ನಿರ್ಣಯಿಸಬೇಕು.
12“ಆದರೆ ಒಬ್ಬನ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ,
13ಯಾಜಕನು ಪರೀಕ್ಷಿಸುವಾಗ ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ, ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದುದರಿಂದ ಅವನು ಶುದ್ಧನು.
14ಆದರೆ ಅಂಥವನ ದೇಹದಲ್ಲಿ ಎಲ್ಲಿಯಾದರೂ ಮಾಂಸ ಕಂಡುಬಂದರೆ ಅವನು ಅಶುದ್ಧನಾಗುವನು.
15ಯಾಜಕನು ಆ ಮಾಂಸವನ್ನು ನೋಡಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಅಂತಹ ಮಾಂಸವು ಅಶುದ್ಧವೇ; ಅದು ಕುಷ್ಠವೇ.
16ಆದರೆ ಆ ಮಾಂಸವು ಅದೇ ಪ್ರಕಾರವಾಗಿ ಇರದೆ ಪುನಃ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
17ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಬೆಳ್ಳಗಾಗಿಹೋಗಿದ್ದರೆ ಆ ಮನುಷ್ಯನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ಶುದ್ಧನೇ.
18“ಒಬ್ಬನ ದೇಹದ ಚರ್ಮದಲ್ಲಿ ಹುಣ್ಣು ಆಗಿದ್ದು ಅದು ವಾಸಿಯಾದ ಮೇಲೆ,
19ಅದು ಇದ್ದ ಸ್ಥಳದಲ್ಲಿ ಬಿಳಿ ಬಾವಾಗಲಿ ಅಥವಾ ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಉಂಟಾದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.

Read ಯಾಜ 13ಯಾಜ 13
Compare ಯಾಜ 13:2-19ಯಾಜ 13:2-19