15ನೀತಿವಂತನು ತನ್ನ ನೀತಿಯಲ್ಲಿಯೇ ನಶಿಸುವುದುಂಟು. ದುಷ್ಟನು ತನ್ನ ದುಷ್ಟತನದಲ್ಲಿಯೇ ಬಹಳ ದಿನ ಬದುಕುವುದುಂಟು. ಇದನ್ನೆಲ್ಲಾ ನನ್ನ ವ್ಯರ್ಥವಾದ ಜೀವಮಾನದಲ್ಲಿ ನೋಡಿದ್ದೇನೆ.
16ನೀನು ಅತಿಯಾಗಿ ನೀತಿವಂತನಾಗಿರಬೇಡ, ನಿನ್ನ ದೃಷ್ಟಿಯಲ್ಲಿ ನೀನು ಜ್ಞಾನಿಯಾಗಿರಬೇಡ. ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?
17ನೀನು ಅತಿಯಾಗಿ ದುಷ್ಟನಾಗಿರಬೇಡ ಇಲ್ಲವೇ ಮೂರ್ಖನಾಗಿರಬೇಡ, ಏಕೆ ಅಕಾಲ ಮರಣವನ್ನು ಹೊಂದುವಿ?
18ನೀನು ಇದನ್ನು ಹಿಡಿದುಕೊಳ್ಳುವುದು ಒಳ್ಳೆಯದು, ಅದರಿಂದ ಕೈಯನ್ನು ಹಿಂತೆಗೆಯಬೇಡ. ದೇವರಿಗೆ ಭಯಪಡುವವನು ಅವೆಲ್ಲವುಗಳಿಂದ ಪಾರಾಗುವನು.
19ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನಿಗೆ ಜ್ಞಾನದಿಂದ ಉಂಟಾಗುವ ಬಲವು ಹೆಚ್ಚು.
20ಪಾಪಮಾಡದೇ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷರು ಲೋಕದಲ್ಲಿ ಇಲ್ಲವೇ ಇಲ್ಲ.
21ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು, ನಿನ್ನ ಆಳು ನಿನ್ನನ್ನು ಶಪಿಸುವುದು ಕಿವಿಗೆ ಬಿದ್ದೀತು.
22ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದಿ ಎಂಬುದಕ್ಕೆ ನಿನ್ನ ಮನಸ್ಸೇ ಸಾಕ್ಷಿ.
23ಇದನ್ನೆಲ್ಲಾ ಜ್ಞಾನದಿಂದ ಪರೀಕ್ಷಿಸಿದೆನು. “ನಾನು ಜ್ಞಾನಿಯಾಗುವೆನು” ಎಂದುಕೊಂಡೆನು. ಆದರೆ ಅದು ನನ್ನಿಂದ ದೂರವಾಯಿತು.
24ಜ್ಞಾನವು ಬಹಳ ದೂರದಲ್ಲಿಯೂ, ಅಗಾಧದಲ್ಲಿಯೂ ಇದೆ. ಅದನ್ನು ಯಾರು ಕಂಡುಕೊಂಡಾರು?
25ನಾನು ತಿರುಗಿಕೊಂಡು, ಜ್ಞಾನವನ್ನು ಮತ್ತು ಮೂಲತತ್ವವನ್ನು ಹುಡುಕಿ, ವಿಚಾರಿಸಿ ಗ್ರಹಿಸುವುದಕ್ಕೂ ಅಧರ್ಮವು ಮೂರ್ಖತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವುದಕ್ಕೂ ಮನಸ್ಸಿಟ್ಟೆನು.