3ಬಹಳ ಚಿಂತೆಯ ಮೂಲಕ ಕನಸು ಉಂಟಾಗುತ್ತದೆ ಮತ್ತು ಮೂಢನ ಧ್ವನಿಯು ಬಹಳ ಮಾತುಗಳಿಂದ ಕೂಡಿದ್ದಾಗಿದೆ.
4ನೀನು ದೇವರಿಗೆ ಹರಕೆಯನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ. ಮೂಢರಲ್ಲಿ ದೇವರಿಗೆ ಸಂತೋಷವಿಲ್ಲ. ನೀನು ಪ್ರಮಾಣಮಾಡಿದ್ದನ್ನು ತೀರಿಸು.
5ನೀನು ಹರಕೆಮಾಡಿದ್ದನ್ನು ನೆರವೇರಿಸದೆ ಇರುವುದಕ್ಕಿಂತ ಹರಕೆಮಾಡದೆ ಇರುವುದು ಒಳ್ಳೆಯದು.
6ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ. “ಇದು ಅಜಾಗ್ರತೆಯಿಂದ ಆಯಿತು” ಎಂದು ದೂತನ ಮುಂದೆ ಹೇಳಬೇಡ. ದೇವರು ನಿನ್ನ ಮಾತಿಗೆ ರೋಷಗೊಂಡು ನಿನ್ನ ಕೈಕೆಲಸವನ್ನು ಏಕೆ ಹಾಳುಮಾಡಬೇಕು?
7ಬಹಳ ಕನಸುಗಳಿಂದಲೂ, ವ್ಯರ್ಥ ವಿಷಯಗಳಿಂದಲೂ, ಹೆಚ್ಚು ಮಾತುಗಳಿಂದಲೂ ವ್ಯರ್ಥವೇ. ನೀನಂತೂ ದೇವರಲ್ಲಿ ಭಯಭಕ್ತಿಯುಳ್ಳವನಾಗಿರು.
8ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ, ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಹೆಚ್ಚಿನ ಅಧಿಕಾರವುಳ್ಳವನಿದ್ದಾನೆ.
9ಭೂಮಿಯಿಂದ ಎಲ್ಲರಿಗೂ ಲಾಭವಿದೆ ಮತ್ತು ಹೊಲಗದ್ದೆಗಳಿಂದ ರಾಜನಿಗೆ ಲಾಭವಾಗುತ್ತದೆ.
10ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗುವುದಿಲ್ಲ ಮತ್ತು ಸಮೃದ್ಧಿಯನ್ನು ಬಯಸುವವನಿಗೆ ಆದಾಯವೆಷ್ಟಾದರೂ ಸಾಲುವುದಿಲ್ಲ. ಇದೂ ಸಹ ವ್ಯರ್ಥವೇ.
11ಆಸ್ತಿ ಹೆಚ್ಚಾದರೆ ಅನುಭವಿಸುವವರ ಸಂಖ್ಯೆಯೂ ಹೆಚ್ಚಾಗುವುದು. ಅದನ್ನು ಕಣ್ಣಿನಿಂದ ನೋಡುವುದೇ ಹೊರತು ಯಜಮಾನನಿಗೆ ಇನ್ಯಾವ ಲಾಭವೂ ಇಲ್ಲ.
12ದುಡಿಯುವವನು ಸ್ವಲ್ಪವೇ ತಿನ್ನಲಿ ಹೆಚ್ಚೇ ತಿನ್ನಲಿ, ಹಾಯಾಗಿ ನಿದ್ರಿಸುತ್ತಾನೆ. ಆದರೆ ಐಶ್ವರ್ಯವಂತನ ಸಮೃದ್ಧಿಯು ಅವನಿಗೆ ನಿದ್ರೆ ಮಾಡಗೊಡಿಸದು.
13ಸೂರ್ಯನ ಕೆಳಗೆ ನಾನು ಮತ್ತೊಂದು ಕೇಡನ್ನು ಕಂಡೆನು. ಯಜಮಾನನು ತನ್ನ ಆಸ್ತಿಯನ್ನು ಕಾಪಾಡುವುದರಲ್ಲಿಯೇ ಕೊರಗುತ್ತಿರುವನು.
14ಆ ಆಸ್ತಿಯು ವ್ಯರ್ಥ ಪ್ರಯತ್ನದಿಂದ ಹಾಳಾಗುವುದು. ಅವನಿಗೆ ಮಗನಿದ್ದರೆ ಆ ಮಗನಿಗಾಗಿ ಅವನ ಕೈಯಲ್ಲಿ ಏನೂ ಇರದು.
15ತಾಯಿಯ ಗರ್ಭದಿಂದ ಹೇಗೆ ಬಂದನೋ ಹಾಗೆಯೇ ಏನೂ ಇಲ್ಲದವನಾಗಿ ಗತಿಸಿ ಹೋಗುವನು. ಅವನು ಪ್ರಯಾಸಪಟ್ಟರೂ, ತನ್ನ ಕೈಯಲ್ಲಿ ಏನೂ ತೆಗೆದುಕೊಂಡು ಹೋಗುವುದಿಲ್ಲ.