20ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.
21ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.
22ವೈರಿಯ ಕುತಂತ್ರವು ಅವನಲ್ಲಿ ಸಾಗದು; ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು.
23ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು; ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು.
24ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು.
25ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು.
26ಅವನು ನನಗೆ, ‘ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ’ ಎಂದು ಹೇಳುವನು.
27ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ, ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.
28ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು.
29ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು.
30ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು, ನನ್ನ ಆಜ್ಞೆಗಳಲ್ಲಿ ನಡೆಯದೆ,
31ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ,
32ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು; ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು.