1ಜೇರಹ ಕುಲದವನಾದ ಏತಾನನ ಪದ್ಯ. ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು; ನನ್ನ ಬಾಯಿ ನಿನ್ನ ಸತ್ಯವನ್ನು, ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು.
2ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು; ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ.
3ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು,
4‘ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು, ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು ಎಂದು ಹೇಳಿದ್ದೇನೆ’” ಎಂಬುವುದೇ. ಸೆಲಾ
5ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು; ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು.
6ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು? ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು?
7ಆತನು ಪರಿಶುದ್ಧರ ಸಭೆಯಲ್ಲಿ ಘನ ಹೊಂದುವ ದೇವರು; ತನ್ನ ಎಲ್ಲಾ ಪರಿವಾರದವರಿಗಿಂತ ಭಯಂಕರನು.
8ಯೆಹೋವನೇ, ಸೇನಾಧೀಶ್ವರನಾದ ದೇವರೇ, ನಿನಗೆ ಸಮಾನರು ಯಾರು? ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು.
9ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು; ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು.
10ರಹಬನ್ನು ಛೇದಿಸಿ ಸಾಯಿಸಿದವನು ನೀನು; ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ.
11ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು.