3ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.
4ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನ ಪ್ರಜೆಗಳು ಪ್ರಾರ್ಥಿಸುವಾಗ ನೀನು ಇನ್ನೆಷ್ಟರವರೆಗೆ ಕೋಪಿಸಿಕೊಳ್ಳುವಿ?
5ರೋದನವೇ ಅವರ ಆಹಾರವಾಗುವಂತೆಯೂ, ಅಶ್ರುಧಾರೆಯೇ ಅವರ ಪಾನವಾಗುವಂತೆಯೂ ಮಾಡಿದಿ.
6ನಮ್ಮನ್ನು ಸುತ್ತಣ ಜನಾಂಗಗಳ ದಿಕ್ಕಾರಕ್ಕೂ, ಶತ್ರುಗಳ ನಿಂದೆಗೂ ಗುರಿಯನ್ನಾಗಿ ಮಾಡಿದಿ.
7ಸೇನಾಧೀಶ್ವರನಾದ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.
8ನೀನು ಐಗುಪ್ತ ದೇಶದಿಂದ ಒಂದು ದ್ರಾಕ್ಷಾಲತೆಯನ್ನು ತಂದು, ಜನಾಂಗಗಳನ್ನು ಹೊರಗೆ ಹಾಕಿ, ಅದನ್ನು ನೆಟ್ಟಿದ್ದಿ.
9ಅದಕ್ಕೋಸ್ಕರ ನೆಲವನ್ನು ಹಸನುಮಾಡಿದ ಮೇಲೆ, ಅದು ಬೇರುಬಿಟ್ಟು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10ಅದರ ನೆರಳಿನಿಂದ ಗುಡ್ಡಗಳೆಲ್ಲಾ ಕವಿಯಲ್ಪಟ್ಟವು. ಅದರ ಕುಡಿಗಳು ದೇವದಾರುವೃಕ್ಷಗಳ ಮೇಲೆ ಹಬ್ಬಿ ಅವುಗಳನ್ನು ಮುಚ್ಚಿಬಿಟ್ಟವು.