48ಅವರ ದನಗಳನ್ನು ಕಲ್ಮಳೆಗೂ, ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
49ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
50ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ, ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.
51ಹಾಮನ ವಂಶದವರ ಪ್ರಥಮಫಲವಾಗಿರುವ ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು.
52ಆತನು ಕುರಿಗಳನ್ನೋ ಎಂಬಂತೆ ತನ್ನ ಜನವನ್ನು ಹೊರತಂದು, ಅಡವಿಯಲ್ಲಿ ಹಿಂಡನ್ನು ಪೋಷಿಸಿ ನಡೆಸಿದನು.
53ಆತನು ಸುರಕ್ಷಿತವಾಗಿ ನಡೆಸಿದ್ದರಿಂದ ಅವರು ಭಯಪಡಲಿಲ್ಲ; ಅವರ ಶತ್ರುಗಳನ್ನು ಸಮುದ್ರವು ಮುಚ್ಚಿಬಿಟ್ಟಿತು;
54ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.
55ಜನಾಂಗಗಳನ್ನು ಅವರ ಮುಂದಿನಿಂದ ಓಡಿಸಿಬಿಟ್ಟು, ಅವರ ದೇಶವನ್ನು ಇಸ್ರಾಯೇಲ್ ಗೋತ್ರಗಳಿಗೆ ಸ್ವತ್ತಾಗಿರುವಂತೆ ಹಂಚಿಕೊಟ್ಟು, ಆ ಜನಾಂಗಗಳ ಬಿಡಾರಗಳಲ್ಲಿ ಅವರನ್ನು ನೆಲೆಗೊಳಿಸಿದನು.
56ಆದರೂ ಅವರು ಪರಾತ್ಪರನಾದ ದೇವರನ್ನು ಪರೀಕ್ಷಿಸಿ ಅವಿಧೇಯರಾದರು. ಆತನ ವಿಧಿಗಳನ್ನು ಕೈಗೊಳ್ಳದೆ,
57ಆತನಿಗೆ ವಿಮುಖರಾಗಿ ತಮ್ಮ ಹಿರಿಯರಂತೆ ದ್ರೋಹಿಗಳಾದರು. ಮೋಸದ ಬಿಲ್ಲಿನಂತೆ ತಿರುಗಿಕೊಂಡರು.
58ಅವರು ತಮ್ಮ ಪೂಜಾಸ್ಥಳಗಳಿಂದ ಆತನನ್ನು ಬೇಸರಗೊಳಿಸಿ, ವಿಗ್ರಹಗಳಿಂದ ರೇಗಿಸಿದರು.