17ಆದರೂ ಅವರು ನಿರ್ಜಲಪ್ರದೇಶದಲ್ಲಿ ಪರಾತ್ಪರನಾದ ದೇವರಿಗೆ ಪದೇಪದೇ ಅವಿಧೇಯರಾಗಿ, ಇನ್ನೂ ಹೆಚ್ಚು ಪಾಪಮಾಡುತ್ತಾ ಬಂದರು.
18ಅವರು ಇಷ್ಟಭೋಜನವನ್ನು ಕೇಳಿಕೊಳ್ಳುವಾಗ, ಸಂಶಯ ಮನಸ್ಸಿನಿಂದ ದೇವರನ್ನು ಪರೀಕ್ಷಿಸಿದರು.
19ಅವರು ಆತನಿಗೆ ವಿರುದ್ಧವಾಗಿ ಹೇಳಿದ್ದೇನೆಂದರೆ, “ದೇವರು ಅರಣ್ಯದಲ್ಲಿ ಊಟಕ್ಕೆ ಬಡಿಸಬಲ್ಲನೋ?
20ಬಂಡೆಯನ್ನು ಹೊಡೆದು, ನೀರು ಚಿಮ್ಮಿ ಹೊರಗೆ ಬರುವಂತೆಯೂ, ಪ್ರವಾಹವು ದಡಮೀರಿ ಹರಿಯುವಂತೆಯೂ ಮಾಡಿದನಲ್ಲವೋ? ಆತನು ರೊಟ್ಟಿಯನ್ನು ಕೊಡಲು ಶಕ್ತನೋ? ತನ್ನ ಜನರಿಗೆ ಮಾಂಸವನ್ನೂ ಒದಗಿಸುವನೋ” ಎಂಬುದೇ.
21ಯೆಹೋವನು ಇದನ್ನು ಕೇಳಿ ರೋಷಗೊಂಡನು. ಅವರು ದೇವರಲ್ಲಿ ಭರವಸವಿಡದೆಯೂ, ಆತನ ರಕ್ಷಣೆಯನ್ನು ನಂಬದೆ ಹೋದುದರಿಂದಲೂ,
22ಆತನಿಗೆ ಇಸ್ರಾಯೇಲರ ಮೇಲೆ ಕೋಪವುಂಟಾಯಿತು; ಯಾಕೋಬ್ ವಂಶದವರಲ್ಲಿ ಬೆಂಕಿ ಹತ್ತಿತು.
23ಆತನು ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು,
24ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ, ಉಣ್ಣಲಿಕ್ಕೆ ಕೊಟ್ಟನು.
25ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು. ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು.
26ಆತನು ಗಗನಮಂಡಲದಲ್ಲಿ ಮೂಡಣ ಗಾಳಿಯನ್ನು ಉಂಟುಮಾಡಿ, ಪ್ರತಾಪದಿಂದ ತೆಂಕಣ ಗಾಳಿಯನ್ನೂ ಹೊಡೆದುಕೊಂಡು ಬಂದು,
27ಧೂಳಿನಷ್ಟು ಮಾಂಸವೃಷ್ಟಿಯನ್ನು ಸುರಿಸಿದನು; ಸಮುದ್ರದ ಮರಳಿನಷ್ಟು ಪಕ್ಷಿಗಳು ಅವರಿದ್ದಲ್ಲಿ ಬೀಳುವಂತೆ ಮಾಡಿದನು.
28ಅವು ಪಾಳೆಯದ ಮಧ್ಯದಲ್ಲಿಯೇ ಅವರ ಬಿಡಾರಗಳ ಸುತ್ತಲೂ ಬಿದ್ದವು.
29ಅವರು ತಿಂದು ಸಂತೃಪ್ತರಾದರು; ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.
30ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು, ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
31ದೇವರ ಕೋಪವು ಅವರಿಗೆ ವಿರುದ್ಧವಾಗಿ ಎದ್ದು, ಅವರಲ್ಲಿ ಕೊಬ್ಬಿದವರನ್ನು ವಧಿಸಿ, ಇಸ್ರಾಯೇಲರ ಪ್ರಾಯಸ್ಥರನ್ನು ನೆಲಕ್ಕುರುಳಿಸಿತು.
32ಇಷ್ಟಾದರೂ ಪುನಃ ಪುನಃ ಪಾಪಮಾಡುತ್ತಾ ಬಂದರು; ಅವರು ಆತನ ಅದ್ಭುತಕೃತ್ಯಗಳನ್ನು ನಂಬದೆ ಹೋದರು.
33ಆದುದರಿಂದ ಆತನು ಅವರ ಜೀವಿತ ದಿನಗಳನ್ನು ಉಸಿರಿನಂತೆಯೂ, ಅವರ ವರ್ಷಗಳನ್ನು ಭಯದಿಂದಲೂ ಮುಗಿಸಿದನು.
34ಸಂಹಾರವಾಗುವಾಗೆಲ್ಲಾ ಅವರು ದೇವರನ್ನು ನೆನಸಿ, ಪುನಃ ಆತನ ಪ್ರಸನ್ನತೆಯನ್ನು ಬಯಸಿ,
35ದೇವರು ತಮ್ಮ ಬಂಡೆಯು, ಪರಾತ್ಪರನಾದ ದೇವರು, ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.
36ಆದರೆ ಅವರು ಆತನನ್ನು ತಮ್ಮ ಬಾಯಿಂದ ವಂಚಿಸಿ, ತಮ್ಮ ನಾಲಿಗೆಯಿಂದ ಸುಳ್ಳಾಡಿದರು.
37ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ.
38ಆದರೂ ಆತನು ಕರುಣಾಳುವೂ, ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ, ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.
39ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.
40ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ, ಅಲ್ಲಿ ಆತನನ್ನು ನೋಯಿಸಿದರು.
41ಆತನನ್ನು ಪದೇಪದೇ ಪರೀಕ್ಷಿಸಿ, ಇಸ್ರಾಯೇಲರ ಸದಮಲಸ್ವಾಮಿಯನ್ನು ಕೋಪಕ್ಕೆ ಗುರಿಮಾಡಿದರು.
42ಅವರು ಆತನ ಭುಜಬಲವನ್ನೂ, ತಮ್ಮನ್ನು ಶತ್ರುಗಳಿಂದ ಬಿಡಿಸಿದ ಸಮಯವನ್ನೂ,
43ಆತನು ಐಗುಪ್ತದಲ್ಲಿ ಮಾಡಿದ ಮಹತ್ಕಾರ್ಯಗಳನ್ನು, ಸೋನ್ ಸೀಮೆಯಲ್ಲಿ ನಡೆಸಿದ ಅದ್ಭುತಗಳನ್ನೂ ಮರೆತುಬಿಟ್ಟರು.
44ಅವರು ಹಳ್ಳದ ನೀರನ್ನು ಕುಡಿಯಲಾಗದಂತೆ, ಆತನು ಅಲ್ಲಿನ ನದಿಗಳನ್ನು ರಕ್ತವನ್ನಾಗಿ ಮಾರ್ಪಡಿಸಿದನು.
45ಅವರನ್ನು ನಾಶಮಾಡುವ ವಿಷದ ಹುಳಗಳನ್ನು, ಹಾಳುಮಾಡುವ ಕಪ್ಪೆಗಳನ್ನು ಕಳುಹಿಸಿಕೊಟ್ಟನು.
46ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ, ಕಷ್ಟಫಲವನ್ನು ಮಿಡತೆಗಳಿಗೂ ಕೊಟ್ಟುಬಿಟ್ಟನು.
47ಅವರ ದ್ರಾಕ್ಷಾಲತೆಗಳನ್ನು ಆನೆಕಲ್ಲಿನಿಂದಲೂ, ಅತ್ತಿಮರಗಳನ್ನು ಕಲ್ಮಳೆಯಿಂದಲೂ ಹಾಳುಮಾಡಿದನು.
48ಅವರ ದನಗಳನ್ನು ಕಲ್ಮಳೆಗೂ, ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
49ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
50ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ, ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.
51ಹಾಮನ ವಂಶದವರ ಪ್ರಥಮಫಲವಾಗಿರುವ ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು.
52ಆತನು ಕುರಿಗಳನ್ನೋ ಎಂಬಂತೆ ತನ್ನ ಜನವನ್ನು ಹೊರತಂದು, ಅಡವಿಯಲ್ಲಿ ಹಿಂಡನ್ನು ಪೋಷಿಸಿ ನಡೆಸಿದನು.
53ಆತನು ಸುರಕ್ಷಿತವಾಗಿ ನಡೆಸಿದ್ದರಿಂದ ಅವರು ಭಯಪಡಲಿಲ್ಲ; ಅವರ ಶತ್ರುಗಳನ್ನು ಸಮುದ್ರವು ಮುಚ್ಚಿಬಿಟ್ಟಿತು;
54ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.
55ಜನಾಂಗಗಳನ್ನು ಅವರ ಮುಂದಿನಿಂದ ಓಡಿಸಿಬಿಟ್ಟು, ಅವರ ದೇಶವನ್ನು ಇಸ್ರಾಯೇಲ್ ಗೋತ್ರಗಳಿಗೆ ಸ್ವತ್ತಾಗಿರುವಂತೆ ಹಂಚಿಕೊಟ್ಟು, ಆ ಜನಾಂಗಗಳ ಬಿಡಾರಗಳಲ್ಲಿ ಅವರನ್ನು ನೆಲೆಗೊಳಿಸಿದನು.
56ಆದರೂ ಅವರು ಪರಾತ್ಪರನಾದ ದೇವರನ್ನು ಪರೀಕ್ಷಿಸಿ ಅವಿಧೇಯರಾದರು. ಆತನ ವಿಧಿಗಳನ್ನು ಕೈಗೊಳ್ಳದೆ,
57ಆತನಿಗೆ ವಿಮುಖರಾಗಿ ತಮ್ಮ ಹಿರಿಯರಂತೆ ದ್ರೋಹಿಗಳಾದರು. ಮೋಸದ ಬಿಲ್ಲಿನಂತೆ ತಿರುಗಿಕೊಂಡರು.
58ಅವರು ತಮ್ಮ ಪೂಜಾಸ್ಥಳಗಳಿಂದ ಆತನನ್ನು ಬೇಸರಗೊಳಿಸಿ, ವಿಗ್ರಹಗಳಿಂದ ರೇಗಿಸಿದರು.
59ದೇವರು ಇದನ್ನು ತಿಳಿದು ರೌದ್ರನಾಗಿ ಇಸ್ರಾಯೇಲರನ್ನು ಸಂಪೂರ್ಣವಾಗಿ ನಿರಾಕರಿಸಿಬಿಟ್ಟನು.
60ತಾನು ಜನರ ಮಧ್ಯದಲ್ಲಿ ವಾಸಿಸುವುದಕ್ಕೋಸ್ಕರ, ಶಿಲೋವ್ ಪಟ್ಟಣದಲ್ಲಿ ಹಾಕಿಸಿದ ನಿವಾಸಸ್ಥಾನವನ್ನು ತ್ಯಜಿಸಿಬಿಟ್ಟು,
61ತನ್ನ ಪ್ರತಾಪವನ್ನು ಸೆರೆಯಾಗುವುದಕ್ಕೂ, ಮಹಿಮೆಯನ್ನು ವಿರೋಧಿಗಳಿಗೂ ಒಪ್ಪಿಸಿಬಿಟ್ಟನು.
62ಆತನು ತನ್ನ ಪ್ರಜೆಯನ್ನು ಖಡ್ಗಕ್ಕೆ ಗುರಿಮಾಡಿ, ತನ್ನ ಬಾಧ್ಯತೆಯ ಮೇಲೆ ಉಗ್ರನಾದನು.
63ಅವರ ಯೌವನಸ್ಥರು ಅಗ್ನಿಗೆ ಆಹುತಿಯಾದರು; ಅವರ ಕನ್ಯೆಯರು ವಿವಾಹವಾಗಲಿಲ್ಲ.
64ಯಾಜಕರು ಕತ್ತಿಯಿಂದ ಸಂಹೃತರಾದರು; ಇವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸಲಿಲ್ಲ.
65ಆ ವರೆಗೆ ನಿದ್ರಿಸುವವನಂತೆಯೂ, ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚೆತ್ತು,
66ತನ್ನ ಶತ್ರುಗಳನ್ನು ಸದೆಬಡಿದು, ನಿತ್ಯನಿಂದೆಗೆ ಅವರನ್ನು ಗುರಿಮಾಡಿದನು.
67ಯೋಸೇಫನ ಕುಲದ ಗುಡಾರವನ್ನು ತಿರಸ್ಕರಿಸಿ, ಎಫ್ರಾಯೀಮ್ ಕುಲವನ್ನು ತ್ಯಜಿಸಿ,
68ಯೆಹೂದ ಕುಲವನ್ನೂ ಮತ್ತು ತನ್ನ ಪ್ರಿಯವಾದ ಚೀಯೋನ್ ಗಿರಿಯನ್ನೂ ಆರಿಸಿಕೊಂಡನು.
69ಆತನು ತನ್ನ ಆಲಯವನ್ನು ಪರ್ವತದಂತೆಯೂ, ತಾನು ಸ್ಥಾಪಿಸಿದ ಭೂಮಿಯಂತೆಯೂ ಶಾಶ್ವತವಾಗಿ ಕಟ್ಟಿದನು.
70ಇದಲ್ಲದೆ ಆತನು ತನ್ನ ಸೇವಕನಾದ ದಾವೀದನನ್ನು ಆರಿಸಿಕೊಂಡು, ಕುರಿಹಟ್ಟಿಯಿಂದ ತೆಗೆದುಕೊಂಡು,
71ಕುರಿಮರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ, ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ ತನ್ನ ಸ್ವತ್ತಾಗಿರುವ ಇಸ್ರಾಯೇಲರನ್ನು ಸಾಕುವುದಕ್ಕೆ ನೇಮಿಸಿದನು.
72ಇವನು ಅವರನ್ನು ಯಥಾರ್ಥಹೃದಯದಿಂದ ಸಾಕಿ, ತನ್ನ ಹಸ್ತಕೌಶಲ್ಯದಿಂದ ನಡೆಸಿದನು.