Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 78

ಕೀರ್ತ 78:1-50

Help us?
Click on verse(s) to share them!
1ಆಸಾಫನ ಪದ್ಯ. ನನ್ನ ಜನರೇ, ನನ್ನ ಉಪದೇಶವನ್ನು ಕೇಳಿರಿ; ನನ್ನ ನುಡಿಗಳನ್ನು ಕಿವಿಗೊಟ್ಟು ಲಾಲಿಸಿರಿ.
2ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು. ಪೂರ್ವಕಾಲದ ಗೂಢಾರ್ಥಗಳನ್ನು ಬಹಿರಂಗಪಡಿಸುವೆನು.
3ನಾವು ನಮ್ಮ ಹಿರಿಯರ ಬಾಯಿಂದ ತಿಳಿದ ಸಂಗತಿಗಳನ್ನು, ಅವರ ಸಂತಾನದವರಿಗೆ ಮರೆಮಾಡದೆ,
4ಯೆಹೋವನ ಘನತೆಯನ್ನು, ಆತನ ಪರಾಕ್ರಮವನ್ನು, ಅದ್ಭುತಕೃತ್ಯಗಳನ್ನು ಮುಂದಣ ಸಂತತಿಯವರಿಗೆ ವಿವರಿಸುವೆವು.
5ಆತನು ಯಾಕೋಬವಂಶದಲ್ಲಿ ತನ್ನ ಕಟ್ಟಳೆಯನ್ನಿಟ್ಟು, ಇಸ್ರಾಯೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟು, ನಮ್ಮ ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, “ಇವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ;
6ಇದರಿಂದ ಅವು ಅವರ ಮುಂದಿನ ಪೀಳಿಗೆಗೆ ಗೊತ್ತಾಗಿ, ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.
7ಆಗ ಅವರು ಮೊಂಡರೂ, ಅವಿಧೇಯರೂ, ಚಪಲಚಿತ್ತರೂ, ದೇವದ್ರೋಹಿಗಳೂ ಆದ ತಮ್ಮ ಪೂರ್ವಿಕರಂತೆ ಆಗದೆ,
8ನನ್ನ ಮಹತ್ಕಾರ್ಯಗಳನ್ನು ಮರೆಯದೆ, ನನ್ನಲ್ಲಿಯೇ ಭರವಸೆಯಿಟ್ಟು, ನನ್ನ ಆಜ್ಞೆಗಳನ್ನು ಕೈಗೊಳ್ಳುವರು” ಎಂಬುದೇ.
9ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸಿದ್ಧರಾಗಿ, ಯುದ್ಧಸಮಯದಲ್ಲಿ ಹಿಂದಿರುಗಿ ಓಡಿಹೋದರು.
10ಅವರು ದೇವರ ನಿಬಂಧನೆಯನ್ನು ಪಾಲಿಸಲಿಲ್ಲ, ಆತನ ಧರ್ಮಶಾಸ್ತ್ರವನ್ನು ಅನುಸರಿಸಲು ಮನಸ್ಸು ಮಾಡಲಿಲ್ಲ.
11ಆತನ ಕಾರ್ಯಗಳನ್ನು, ಆತನು ತಮ್ಮೆದುರಿನಲ್ಲಿ ನಡೆಸಿದ ಅದ್ಭುತಗಳನ್ನು ಮರೆತುಬಿಟ್ಟರು.
12ಆತನು ಐಗುಪ್ತದೇಶದ ಸೋನ್ ಸೀಮೆಯಲ್ಲಿ, ಅವರ ಪೂರ್ವಿಕರ ಸಮಕ್ಷದಲ್ಲಿಯೇ ಆಶ್ಚರ್ಯ ಕ್ರಿಯೆಗಳನ್ನು ನಡೆಸಿದನು.
13ಆತನು ಸಮುದ್ರವನ್ನು ವಿಭಾಗಿಸಿ, ಅದರ ನೀರನ್ನು ರಾಶಿಯಾಗಿ ನಿಲ್ಲುವಂತೆ ಮಾಡಿ, ಅವರನ್ನು ದಾಟಿಸಿದನು.
14ಹಗಲಿನಲ್ಲಿ ಮೋಡದಿಂದಲೂ, ರಾತ್ರಿಯಲ್ಲಿ ಬೆಂಕಿಯ ಬೆಳಕಿನಿಂದಲೂ, ಆತನು ಅವರನ್ನು ಕರೆದೊಯ್ದನು.
15ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ, ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು.
16ಗಿರಿಶಿಲೆಯಿಂದ ಜಲಪ್ರವಾಹಗಳನ್ನು ಹೊರಡಿಸಿ, ನದಿಗಳಾಗಿ ಹರಿಯಮಾಡಿದನು.
17ಆದರೂ ಅವರು ನಿರ್ಜಲಪ್ರದೇಶದಲ್ಲಿ ಪರಾತ್ಪರನಾದ ದೇವರಿಗೆ ಪದೇಪದೇ ಅವಿಧೇಯರಾಗಿ, ಇನ್ನೂ ಹೆಚ್ಚು ಪಾಪಮಾಡುತ್ತಾ ಬಂದರು.
18ಅವರು ಇಷ್ಟಭೋಜನವನ್ನು ಕೇಳಿಕೊಳ್ಳುವಾಗ, ಸಂಶಯ ಮನಸ್ಸಿನಿಂದ ದೇವರನ್ನು ಪರೀಕ್ಷಿಸಿದರು.
19ಅವರು ಆತನಿಗೆ ವಿರುದ್ಧವಾಗಿ ಹೇಳಿದ್ದೇನೆಂದರೆ, “ದೇವರು ಅರಣ್ಯದಲ್ಲಿ ಊಟಕ್ಕೆ ಬಡಿಸಬಲ್ಲನೋ?
20ಬಂಡೆಯನ್ನು ಹೊಡೆದು, ನೀರು ಚಿಮ್ಮಿ ಹೊರಗೆ ಬರುವಂತೆಯೂ, ಪ್ರವಾಹವು ದಡಮೀರಿ ಹರಿಯುವಂತೆಯೂ ಮಾಡಿದನಲ್ಲವೋ? ಆತನು ರೊಟ್ಟಿಯನ್ನು ಕೊಡಲು ಶಕ್ತನೋ? ತನ್ನ ಜನರಿಗೆ ಮಾಂಸವನ್ನೂ ಒದಗಿಸುವನೋ” ಎಂಬುದೇ.
21ಯೆಹೋವನು ಇದನ್ನು ಕೇಳಿ ರೋಷಗೊಂಡನು. ಅವರು ದೇವರಲ್ಲಿ ಭರವಸವಿಡದೆಯೂ, ಆತನ ರಕ್ಷಣೆಯನ್ನು ನಂಬದೆ ಹೋದುದರಿಂದಲೂ,
22ಆತನಿಗೆ ಇಸ್ರಾಯೇಲರ ಮೇಲೆ ಕೋಪವುಂಟಾಯಿತು; ಯಾಕೋಬ್ ವಂಶದವರಲ್ಲಿ ಬೆಂಕಿ ಹತ್ತಿತು.
23ಆತನು ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು,
24ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ, ಉಣ್ಣಲಿಕ್ಕೆ ಕೊಟ್ಟನು.
25ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು. ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು.
26ಆತನು ಗಗನಮಂಡಲದಲ್ಲಿ ಮೂಡಣ ಗಾಳಿಯನ್ನು ಉಂಟುಮಾಡಿ, ಪ್ರತಾಪದಿಂದ ತೆಂಕಣ ಗಾಳಿಯನ್ನೂ ಹೊಡೆದುಕೊಂಡು ಬಂದು,
27ಧೂಳಿನಷ್ಟು ಮಾಂಸವೃಷ್ಟಿಯನ್ನು ಸುರಿಸಿದನು; ಸಮುದ್ರದ ಮರಳಿನಷ್ಟು ಪಕ್ಷಿಗಳು ಅವರಿದ್ದಲ್ಲಿ ಬೀಳುವಂತೆ ಮಾಡಿದನು.
28ಅವು ಪಾಳೆಯದ ಮಧ್ಯದಲ್ಲಿಯೇ ಅವರ ಬಿಡಾರಗಳ ಸುತ್ತಲೂ ಬಿದ್ದವು.
29ಅವರು ತಿಂದು ಸಂತೃಪ್ತರಾದರು; ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.
30ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು, ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
31ದೇವರ ಕೋಪವು ಅವರಿಗೆ ವಿರುದ್ಧವಾಗಿ ಎದ್ದು, ಅವರಲ್ಲಿ ಕೊಬ್ಬಿದವರನ್ನು ವಧಿಸಿ, ಇಸ್ರಾಯೇಲರ ಪ್ರಾಯಸ್ಥರನ್ನು ನೆಲಕ್ಕುರುಳಿಸಿತು.
32ಇಷ್ಟಾದರೂ ಪುನಃ ಪುನಃ ಪಾಪಮಾಡುತ್ತಾ ಬಂದರು; ಅವರು ಆತನ ಅದ್ಭುತಕೃತ್ಯಗಳನ್ನು ನಂಬದೆ ಹೋದರು.
33ಆದುದರಿಂದ ಆತನು ಅವರ ಜೀವಿತ ದಿನಗಳನ್ನು ಉಸಿರಿನಂತೆಯೂ, ಅವರ ವರ್ಷಗಳನ್ನು ಭಯದಿಂದಲೂ ಮುಗಿಸಿದನು.
34ಸಂಹಾರವಾಗುವಾಗೆಲ್ಲಾ ಅವರು ದೇವರನ್ನು ನೆನಸಿ, ಪುನಃ ಆತನ ಪ್ರಸನ್ನತೆಯನ್ನು ಬಯಸಿ,
35ದೇವರು ತಮ್ಮ ಬಂಡೆಯು, ಪರಾತ್ಪರನಾದ ದೇವರು, ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.
36ಆದರೆ ಅವರು ಆತನನ್ನು ತಮ್ಮ ಬಾಯಿಂದ ವಂಚಿಸಿ, ತಮ್ಮ ನಾಲಿಗೆಯಿಂದ ಸುಳ್ಳಾಡಿದರು.
37ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ.
38ಆದರೂ ಆತನು ಕರುಣಾಳುವೂ, ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ, ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.
39ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.
40ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ, ಅಲ್ಲಿ ಆತನನ್ನು ನೋಯಿಸಿದರು.
41ಆತನನ್ನು ಪದೇಪದೇ ಪರೀಕ್ಷಿಸಿ, ಇಸ್ರಾಯೇಲರ ಸದಮಲಸ್ವಾಮಿಯನ್ನು ಕೋಪಕ್ಕೆ ಗುರಿಮಾಡಿದರು.
42ಅವರು ಆತನ ಭುಜಬಲವನ್ನೂ, ತಮ್ಮನ್ನು ಶತ್ರುಗಳಿಂದ ಬಿಡಿಸಿದ ಸಮಯವನ್ನೂ,
43ಆತನು ಐಗುಪ್ತದಲ್ಲಿ ಮಾಡಿದ ಮಹತ್ಕಾರ್ಯಗಳನ್ನು, ಸೋನ್ ಸೀಮೆಯಲ್ಲಿ ನಡೆಸಿದ ಅದ್ಭುತಗಳನ್ನೂ ಮರೆತುಬಿಟ್ಟರು.
44ಅವರು ಹಳ್ಳದ ನೀರನ್ನು ಕುಡಿಯಲಾಗದಂತೆ, ಆತನು ಅಲ್ಲಿನ ನದಿಗಳನ್ನು ರಕ್ತವನ್ನಾಗಿ ಮಾರ್ಪಡಿಸಿದನು.
45ಅವರನ್ನು ನಾಶಮಾಡುವ ವಿಷದ ಹುಳಗಳನ್ನು, ಹಾಳುಮಾಡುವ ಕಪ್ಪೆಗಳನ್ನು ಕಳುಹಿಸಿಕೊಟ್ಟನು.
46ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ, ಕಷ್ಟಫಲವನ್ನು ಮಿಡತೆಗಳಿಗೂ ಕೊಟ್ಟುಬಿಟ್ಟನು.
47ಅವರ ದ್ರಾಕ್ಷಾಲತೆಗಳನ್ನು ಆನೆಕಲ್ಲಿನಿಂದಲೂ, ಅತ್ತಿಮರಗಳನ್ನು ಕಲ್ಮಳೆಯಿಂದಲೂ ಹಾಳುಮಾಡಿದನು.
48ಅವರ ದನಗಳನ್ನು ಕಲ್ಮಳೆಗೂ, ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
49ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
50ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ, ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.

Read ಕೀರ್ತ 78ಕೀರ್ತ 78
Compare ಕೀರ್ತ 78:1-50ಕೀರ್ತ 78:1-50