2ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು; ಬೇಸರವಿಲ್ಲದೆ ರಾತ್ರಿಯೆಲ್ಲಾ ಕೈಚಾಚಿಕೊಂಡೇ ಇದ್ದೆನು. ನನ್ನ ಮನಸ್ಸು ಶಾಂತಿಯನ್ನು ಹೊಂದಲೊಲ್ಲದೆ ಇತ್ತು.
3ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು; ಮನಗುಂದಿದವನಾಗಿಯೇ ಹಂಬಲಿಸುವೆನು.
4ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ. ತಳಮಳಗೊಂಡು ಮಾತನಾಡಲಾರದೆ ಇದ್ದೆನು.
5ಹಳೆಯ ದಿನಗಳನ್ನೂ, ಪುರಾತನ ವರ್ಷಗಳನ್ನೂ ಜ್ಞಾಪಕಮಾಡಿಕೊಂಡೆನು.
6ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಪಿಸಿಕೊಳ್ಳುವೆನು, ನನ್ನ ಆಂತರ್ಯದಲ್ಲಿ ಮಾತನಾಡಿಕೊಳ್ಳುವೆನು ಅಂದುಕೊಂಡು ನನ್ನ ಮನಸ್ಸಿನಲ್ಲಿ,
7“ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವುದಿಲ್ಲವೋ?
8ಆತನ ಕೃಪಾವಾತ್ಸಲ್ಯವು ನಿಂತೇ ಹೋಯಿತೋ? ಆತನ ವಾಗ್ದಾನವು ಎಂದೆಂದಿಗೂ ಬಿದ್ದೇ ಹೋಯಿತೋ?
9ದೇವರು ದಯೆ ತೋರಿಸಲಿಕ್ಕೆ ಮರೆತುಬಿಟ್ಟನೋ? ಕೋಪದಿಂದ ತನ್ನ ಕರಳುಗಳನ್ನು ಬಿಗಿಹಿಡಿದಿದ್ದಾನೋ?” ಎಂದು ಅಂದುಕೊಂಡೆನು ಸೆಲಾ
10ಪುನಃ ನಾನು, “ಹೀಗೆ ನೆನಸುವುದು ನನ್ನ ಬಲಹೀನತೆಯೇ. ಪರಾತ್ಪರನಾದ ದೇವರ ಭುಜಬಲವು ಪ್ರಕಟವಾದ ವರ್ಷಗಳನ್ನು ಜ್ಞಾಪಿಸಿಕೊಳ್ಳುವೆನು.
11ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡೆಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು.
12ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು” ಅಂದುಕೊಂಡೆನು.
13ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದುದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು?
14ಅದ್ಭುತಗಳನ್ನು ನಡೆಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ.
15ಯಾಕೋಬ ಮತ್ತು ಯೋಸೇಫರ ವಂಶದವರಾದ ನಿನ್ನ ಪ್ರಜೆಯನ್ನು, ಭುಜಬಲದಿಂದ ಬಿಡುಗಡೆಮಾಡಿದಿ. ಸೆಲಾ
16ದೇವರೇ, ಜಲರಾಶಿಗಳು ನಿನ್ನನ್ನು ಕಂಡವು; ಕಾಣುತ್ತಲೇ ತಳಮಳಗೊಂಡು ತಳದವರೆಗೂ ಅಲ್ಲಕಲ್ಲೋಲವಾದವು.
17ಮೇಘಮಂಡಲವು ಮಳೆಗರೆಯಿತು; ಆಕಾಶವು ಗರ್ಜಿಸಿತು; ನಿನ್ನ ಬಾಣಗಳು ಎಲ್ಲಾ ಕಡೆಯೂ ಹಾರಿದವು.
18ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು; ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು; ಭೂಮಿಯು ಅಲ್ಲಾಡಿ ಕಂಪಿಸಿತು.
19ನೀನು ಸಮುದ್ರದಲ್ಲಿ ಮಾರ್ಗಮಾಡಿದಿ; ಮಹಾಜಲರಾಶಿಗಳನ್ನು ದಾಟಿದಿ; ನಿನ್ನ ಹೆಜ್ಜೆ ಗುರುತು ಕಾಣಲಿಲ್ಲ.
20ಕುರುಬನು ಕುರಿಹಿಂಡನ್ನು ಹೇಗೋ, ಹಾಗೆಯೇ ನೀನು ಮೋಶೆ ಮತ್ತು ಆರೋನರ ಮುಖಾಂತರ, ನಿನ್ನ ಪ್ರಜೆಯನ್ನು ಮುನ್ನಡೆಸಿದಿ.