17ದೇವರೇ, ನೀನು ಬಾಲ್ಯದಿಂದಲೂ ನನ್ನನ್ನು ಉಪದೇಶಿಸುತ್ತಾ ಬಂದಿದ್ದಿ. ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.
18ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.
19ದೇವರೇ, ನಿನ್ನ ನೀತಿಯು ಆಕಾಶವನ್ನು ನಿಲುಕುವಷ್ಟು ಮಹೋನ್ನತವಾಗಿದೆ. ಮಹತ್ತರವಾದ ಕೃತ್ಯಗಳನ್ನು ನಡೆಸಿದ ದೇವರೇ, ನಿನಗೆ ಸಮಾನರು ಯಾರು?
20ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು; ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು.
21ನನ್ನ ಗೌರವವನ್ನು ಹೆಚ್ಚಿಸು; ನನಗೆ ಅಭಿಮುಖನಾಗಿ ಸಂತೈಸು.
22ನನ್ನ ದೇವರೇ, ನಿನ್ನ ಸತ್ಯತೆಯನ್ನು ಸ್ಮರಿಸುವೆನು; ಸ್ವರಮಂಡಲದಿಂದ ನಿನ್ನನ್ನು ಸಂಕೀರ್ತಿಸುವೆನು. ಇಸ್ರಾಯೇಲರ ಪರಿಶುದ್ಧ ದೇವರು, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು.