10ನಾನು ದುಃಖದಿಂದ ಅತ್ತು ಉಪವಾಸ ಮಾಡಿ ನನ್ನ ಆತ್ಮವನ್ನು ಕುಗ್ಗಿಸಿಕೊಂಡಿದ್ದೇನೆ, ಪರಿಹಾಸ್ಯಕ್ಕೆ ಕಾರಣವಾಯಿತು.
11ನಾನು ಗೋಣಿತಟ್ಟು ಕಟ್ಟಿಕೊಂಡದ್ದು, ಅವರ ಗಾದೆಗೆ ಆಸ್ಪದವಾಯಿತು.
12ಊರ ಬಾಗಿಲಲ್ಲಿ ಕುಳಿತುಕೊಳ್ಳುವವರ ಆಡು ಮಾತಿಗೆ ಗುರಿಯಾಗಿದ್ದೇನೆ. ಕುಡುಕರು ನನ್ನ ವಿಷಯವನ್ನು ಹಾಡಿ ಪರಿಹಾಸ್ಯ ಮಾಡುತ್ತಾರೆ.
13ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ; ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ, ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು.
14ನಾನು ಕೆಸರಿನಲ್ಲಿ ಮುಳುಗಿಹೋಗದಂತೆ ಮೇಲೆತ್ತು; ವೈರಿಗಳ ಕೈಯೊಳಗಿಂದ ಬಿಡಿಸು; ಮಹಾಜಲರಾಶಿಯಿಂದ ಎಳೆದುಕೋ.
15ಪ್ರವಾಹವು ನನ್ನನ್ನು ಬಡಕೊಂಡು ಹೋಗದಿರಲಿ; ಅಗಾಧವು ನನ್ನನ್ನು ಒಳಗೆ ಎಳೆದುಕೊಳ್ಳದಿರಲಿ; ಪಾತಾಳವು ನನ್ನನ್ನು ನುಂಗದಿರಲಿ.
16ಯೆಹೋವನೇ, ನನ್ನ ಮೊರೆಯನ್ನು ಲಾಲಿಸು; ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ. ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.