1ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ.
2ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ.
3ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ.
4ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ.
5ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು, ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ.
6ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.