3ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ; ಆದುದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡೆಸು.
4ಶತ್ರುಗಳು ನನಗೆ ರಹಸ್ಯವಾಗಿ ಹಾಕಿದ ಬಲೆಯೊಳಗೆ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು;
5ನೀನೇ ನನಗೆ ಆಧಾರವಲ್ಲವೇ; ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದೇನೆ. ಯೆಹೋವನೇ, ನಂಬಿಗಸ್ತನಾದ ದೇವರೇ, ನನ್ನನ್ನು ವಿಮೋಚಿಸಿದ್ದೀ.
6ವ್ಯರ್ಥವಾದ ವಿಗ್ರಹಗಳನ್ನೂ ಅವಲಂಬಿಸಿದವರನ್ನು ನಾನು ದ್ವೇಷಿಸುತ್ತೇನೆ; ನಾನಾದರೋ ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.
7ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವುದನ್ನು ನೋಡಿ, ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.
8ನೀನು ನನ್ನನ್ನು ಶತ್ರುಗಳ ಕೈಕೆಳಗೆ ಬೀಳಿಸಲಿಲ್ಲ; ನಿರಾತಂಕ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಿದಿ.
9ಯೆಹೋವನೇ, ಕರುಣಿಸು; ಕಷ್ಟದಲ್ಲಿ ಬಿದ್ದಿದ್ದೇನೆ. ನನಗುಂಟಾದ ಬಾಧೆಯ ದೆಸೆಯಿಂದ ನನ್ನ ಕಣ್ಣು ಗುಡ್ಡೆ ಸೇದಿಹೋಗಿದೆ; ದೇಹಾತ್ಮಗಳು ಕುಗ್ಗಿಹೋದವು.
10ನನ್ನ ಜೀವಮಾನವೆಲ್ಲಾ ದುಃಖದಲ್ಲಿಯೂ, ನಿಟ್ಟುಸಿರಿನಲ್ಲಿಯೂ ಕಳೆದುಹೋಗುತ್ತಾ ಇದೆ; ನನ್ನ ಸಂಕಟಗಳಿಂದ ನನ್ನ ಶಕ್ತಿಯು ಕುಂದಿಹೋಗಿದೆ; ನನ್ನ ಎಲುಬುಗಳು ಸವೆದುಹೋಗಿವೆ.