3ಯೆಹೋವನು ಸ್ತೋತ್ರಕ್ಕೆ ಅರ್ಹನು; ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.
4ಮೃತ್ಯುಪಾಶಗಳು ನನಗೆ ಸುತ್ತಿಕೊಂಡವು; ನಾಶಪ್ರವಾಹವು ನನ್ನನ್ನು ನಡುಗಿಸಿತು.
5ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು; ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
6ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಶಬ್ದವನ್ನು ಕೇಳಿದನು; ನನ್ನ ಕೂಗು ಆತನಿಗೆ ಕೇಳಿಸಿತು.
7ಆಗ ಆತನಿಗೆ ಸಿಟ್ಟೇರಿದ್ದರಿಂದ, ಭೂಮಿಯು ಗಡಗಡನೆ ಕಂಪಿಸಿತು, ಪರ್ವತಗಳ ಬುಡಗಳು ನಡುಗಿ ಕದಲಿದವು.
8ಆತನ ಮೂಗಿನಿಂದ ಹೊಗೆಯು ಎದ್ದು; ಆತನ ಬಾಯಿಂದ ಅಗ್ನಿಜ್ವಾಲೆ ಹೊರಟು, ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.
9ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.
10ಕೆರೂಬಿವಾಹನನಾಗಿ ಹಾರಿ, ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಆತನು ಇಳಿದು ಬಂದನು.
11ಕತ್ತಲನ್ನು ತನ್ನ ಸುತ್ತಲು ಗುಡಾರದಂತೆ ಕವಿಸಿಕೊಂಡು, ಜಲಮಯವಾಗಿರುವ ನೀಲಮೇಘಗಳ ಮಧ್ಯದಲ್ಲಿ ಮರೆಯಾದನು.
12ಆತನ ಸನ್ನಿಧಿಯ ಪ್ರಕಾಶದಿಂದ ಕಲ್ಮಳೆಯೂ, ಉರಿಗೆಂಡಗಳೂ ಹೊರಟು, ಆತನ ಸುತ್ತಲಿದ್ದ ಕಪ್ಪು ಮೋಡಗಳನ್ನು ದಾಟಿ ಸುರಿದವು.
13ಯೆಹೋವನು ಆಕಾಶದಲ್ಲಿ ಗುಡುಗಿದನು; ಪರಾತ್ಪರನಾದ ದೇವರು ಧ್ವನಿಗೊಟ್ಟನು. ಕಲ್ಮಳೆಯೂ, ಉರಿಗೆಂಡಗಳೂ ಹೊರಟವು.
14ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದರಿಸಿಬಿಟ್ಟನು; ಸಿಡಿಲುಗಳಿಂದ ಕಳವಳಗೊಳಿಸಿದನು.
15ಆಗ ಯೆಹೋವನೇ, ನಿನ್ನ ಗದರಿಕೆಯಿಂದಲೂ, ನಿನ್ನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ತಿವಾರಗಳು ಕಂಡುಬಂದವು.
16ಆತನು ಮೇಲಣ ಲೋಕದಿಂದ ಕೈಚಾಚಿ, ನನ್ನನ್ನು ಹಿಡಿದು, ಮಹಾಜಲರಾಶಿಗಳೊಳಗಿಂದ ಎಳೆದನು.
17ನನಗಿಂತ ಬಲಿಷ್ಠರೂ, ಪುಷ್ಟರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು.
18ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು, ಆಗ ಯೆಹೋವನು ನನಗೆ ಉದ್ಧಾರಕನಾದನು.